Saturday, October 18, 2025

ಗಾಯಕ ಜುಬೀನ್ ಗಾರ್ಗ್ ನಿಗೂಢ ಸಾವು: ಸಿಂಗಾಪುರ ಪೊಲೀಸರಿಂದ ಬಿಗ್ ಅಪ್ಡೇಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗಾಯಕ ಜುಬೀನ್ ಗಾರ್ಗ್ ಸಾವು ಸಂಭವಿಸಿದ ಒಂದು ತಿಂಗಳ ಬಳಿಕ ಸಿಂಗಾಪುರದ ಪೊಲೀಸರು,’ಅಪರಾಧ ನಡೆದಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ಎಂದು ತಿಳಿಸಿದ್ದಾರೆ.

ಈಶಾನ್ಯ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪೂರಕ್ಕೆ ತೆರಳಿದ್ದ ಸಂದರ್ಭ, ಸ್ಕೂಬಾ ಡೈವಿಂಗ್‌ಗೆ ವೇಳೆ ಸಮುದ್ರದಲ್ಲಿ ಮುಳುಗಿ ಗಾರ್ಗ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಭಾರತ, ವಿಶೇಷವಾಗಿ ಅವರ ಹುಟ್ಟೂರು ಅಸ್ಸಾಂನಲ್ಲಿ ಶೋಕದ ಛಾಯೆ ಆವರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಈವೆಂಟ್ ಆಯೋಜಕ ಶ್ಯಾಮ್‌ಕನು ಮಹಂತ, ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಅಲ್ಲದೇ ಎಪಿಎಸ್ ಅಧಿಕಾರಿ ಸಂದೀಪನ್ ಗಾರ್ಗ್ ಮತ್ತು ನಂದೇಶ್ವರ ಬೋರಾ ಸೇರಿದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

‘ಈ ಪ್ರಕರಣವನ್ನು ಸಿಂಗಾಪುರದ ಕೊರೋನರ್ಸ್ ಆ್ಯಕ್ಟ್ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅಪರಾಧ ನಡೆದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ ಪೊಲೀಸರು ತಿಳಿಸಿದ್ದಾರೆ.’ಎಸ್‌ಪಿಎಫ್ ಈ ಪ್ರಕರಣವನ್ನು ಸಮಗ್ರ ಹಾಗೂ ವೃತ್ತಿಪರ ರೀತಿಯಲ್ಲಿ ತನಿಖೆ ನಡೆಸಲು ಬದ್ಧವಾಗಿದ್ದು, ಇದಕ್ಕೆ ಸಮಯದ ಅವಶ್ಯಕತೆ ಇದೆ. ದಯವಿಟ್ಟು ತನಿಖೆ ಮುಗಿಯುವವರೆಗೂ ಊಹಾಪೂಹ ಅಥವಾ ವದಂತಿಗಳನ್ನು ಜನರು ನಂಬಬಾರದು ಮತ್ತು ಶಾಂತಿ ಕಾಪಾಡಬೇಕು’ ಎಂದು ಮನವಿ ಮಾಡಿದ್ದಾರೆ.

ತನಿಖೆ ಪೂರ್ಣಗೊಂಡ ನಂತರ ಸಿಂಗಾಪುರದ ರಾಜ್ಯ ಕೋರನರ್‌ಗೆ ವರದಿಯನ್ನು ಸಲ್ಲಿಸಲಾಗುವುದು. ಅಲ್ಲಿನ ಅಧಿಕಾರಿಗಳು ಪೊಲೀಸ್ ವರದಿಗಳ ದೃಢೀಕರಣ ಅವಶ್ಯಕತೆ ಇದೆಯೇ ಎಂಬುವುದನ್ನು ತೀರ್ಮಾನಿಸುತ್ತಾರೆ. ಬಳಿಕ ಆ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಸಿಂಗಾಪುರ ಪೊಲೀಸರು ಹೇಳಿದ್ದಾರೆ.

ಭಾರತದ ಮನವಿಯಂತೆ ಸಿಂಗಾಪುರ ಪೊಲೀಸರು ಅಕ್ಟೋಬರ್ 1ರಂದು ಗಾಯಕನ ಮರಣೋತ್ತರ ಪರೀಕ್ಷೆ ಹಾಗೂ ಪ್ರಾಥಮಿಕ ತನಿಖಾ ವರದಿಯನ್ನು ಹಂಚಿಕೊಂಡಿದ್ದರು.

error: Content is protected !!