ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳ ಗುಂಪೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಾಡನ್ನು ಹಾಡಿದ್ದು, ಈ ಬಗ್ಗೆ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದರು. ಬಳಿಕ ದಕ್ಷಿಣ ರೈಲ್ವೆ ಹಂಚಿಕೊಂಡ ವಿಡಿಯೊದಲ್ಲಿ ವಿದ್ಯಾರ್ಥಿಗಳು ರೈಲಿನಲ್ಲಿ ಆರ್‌ಎಸ್‌ಎಸ್ ಹಾಡನ್ನು ಪ್ರದರ್ಶಿಸುವುದನ್ನು ತೋರಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗಳ ನಂತರ ಆ ವಿಡಿಯೊವನ್ನು ಡಿಲೀಟ್ ಮಾಡಲಾಯಿತು. ನಂತರ ಇಂಗ್ಲಿಷ್ ಅನುವಾದದೊಂದಿಗೆ ಮರು ಅಪ್‌ಲೋಡ್ ಮಾಡಲಾಯಿತು.
ಇದೀಗ ವಿದ್ಯಾರ್ಥಿಗಳನ್ನು ಸಮರ್ಥಿಸಿಕೊಂಡ ಸರಸ್ವತಿ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಡಿಂಟೊ ಕೆ.ಪಿ., ಈ ಹಾಡು ದೇಶಭಕ್ತಿಯ ಕೃತಿಯಾಗಿದ್ದು, ದಕ್ಷಿಣ ರೈಲ್ವೆಯ ಆದೇಶದ ಮೇರೆಗೆ ಇದನ್ನು ಪ್ರದರ್ಶಿಸಲಾಗಿಲ್ಲ ಎಂದು ಹೇಳಿದರು. ದಕ್ಷಿಣ ರೈಲ್ವೆ ನಿರ್ದೇಶನದಂತೆ ಇದನ್ನು ಹಾಡಲಾಗಿಲ್ಲ. ಆದರೆ, ಮಕ್ಕಳು ಅದನ್ನು ಮಲಯಾಳಂ ದೇಶಭಕ್ತಿ ಗೀತೆಯಾಗಿ ಹಾಡಲು ಆಯ್ಕೆ ಮಾಡಿಕೊಂಡರು ಎಂದು ಹೇಳಿದ್ದಾರೆ.
ವಿಡಿಯೊ ಡಿಲೀಟ್ ಮಾಡಿದ ನಂತರ ಶಾಲೆಯು ಪ್ರಧಾನಮಂತ್ರಿ ಕಚೇರಿ ಮತ್ತು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದೆ ಎಂದು ಪ್ರಾಂಶುಪಾಲರು ಹೇಳಿದರು. ರಾಜ್ಯ ಶಿಕ್ಷಣ ಸಚಿವರು ಈ ವಿಷಯದ ಬಗ್ಗೆ ತನಿಖೆಗೆ ಏಕೆ ಆದೇಶಿಸಿದ್ದಾರೆಂದು ನಮಗೆ ತಿಳಿದಿಲ್ಲ. ಶಿಕ್ಷಣ ಇಲಾಖೆ ತನ್ನ ಕ್ರಮದೊಂದಿಗೆ ಮುಂದುವರಿದರೆ ನಾವು ಕಾನೂನು ಮಾರ್ಗದಲ್ಲಿ ಹೋಗುವ ಬಗ್ಗೆ ಯೋಚಿಸುತ್ತೇವೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸಂಘಿ ಮಕ್ಕಳು ಎಂದು ಕರೆಯಲಾಗುತ್ತಿದೆ ಅಂತಾ ಅವರು ಬೇಸರ ವ್ಯಕ್ತಪಡಿಸಿದರು.
ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ
ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಈ ವಿಷಯವನ್ನು ಗಂಭೀರ ವಿಷಯವೆಂದು ಕರೆದು ತನಿಖೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಈ ಮಧ್ಯೆ, ಕೇಂದ್ರ ಸಚಿವರಾದ ಸುರೇಶ್ ಗೋಪಿ ಮತ್ತು ಜಾರ್ಜ್ ಕುರಿಯನ್ ಸೇರಿದಂತೆ ಬಿಜೆಪಿ ನಾಯಕರು ಈ ಕೃತ್ಯವನ್ನು ಸಮರ್ಥಿಸಿಕೊಂಡರು. ಹಾಡು ದೇಶಭಕ್ತಿಯಿಂದ ಕೂಡಿದೆ ಎಂದು ಹೇಳಿದರು. ಆ ಕ್ಷಣ ಅವರಿಗೆ ಆ ಹಾಡನ್ನು ಹಾಡಬೇಕೆಂದು ಅನಿಸಿದ್ದಿರಬಹುದು ಎಂದರು. ಇದೇನು ಉಗ್ರಗಾಮಿ ಹಾಡಂತೂ ಅಲ್ಲ. ಹೀಗಾಗಿ ಈ ಗೀತೆ ಹಾಡಿರುವುದು ಸಂತೋಷದಾಯಕ ವಿಚಾರ ಎಂದು ಬಣ್ಣಿಸಿದರು.

