ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ 2 ಕೋಟಿ ರೂ. ಮೀಸಲು ಇಡಲಾಗಿದೆ.
2026ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಸಾಹಿತ್ಯ- ಸಂಸ್ಕೃತಿ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ. ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪರವರ ಜನ್ಮಶತಮಾನೋತ್ಸವ ಅಂಗವಾಗಿ ಅವರ ಗೀತೆಗಳ ಗಾಯನ, ವಿಚಾರ ಸಂಕಿರಣ, ಕವಿಗೋಷ್ಠಿ, ಆಯ್ದ ಕೃತಿಗಳ ಇಂಗ್ಲೀಷ್ ಅನುವಾದ, ಸಾಹಿತ್ಯ ವಾಚಿಕೆ ಹಾಗೂ ಜಿಎಸ್ಎಸ್ ಪ್ರಶಸ್ತಿ ನೀಡಲು ಎರಡು ಕೋಟಿ ರೂಪಾಯಿ ಮೀಸಲು ಇಡಲಾಗಿದೆ.
ಇನ್ನು ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ʻಬೆಂಗಳೂರು ಹಬ್ಬʼ ಸಂಯೋಜಕರ ಸಹಯೋಗದೊಂದಿಗೆ ಪ್ರತಿ ವರ್ಷ ರಂಗಭೂಮಿ, ಲಲಿತಕಲೆ, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿ ಕಲಾಪ್ರಕಾರಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಐದು ಕೋಟಿ ರೂ.ಗಳನ್ನು ನೀಡಲಾಗುವುದು.
ಎಲ್ಲಾ ಜಾನಪದ ಹಾಗೂ ಬುಡಕಟ್ಟು ಕಲಾವಿದರು, ವಿದ್ವಾಂಸರು ಹಾಗೂ ಜಾನಪದ ವಾದ್ಯಗಾರರನ್ನು ಒಳಗೊಂಡ ಸಮಾವೇಶಗಳನ್ನು ʻಜಾನಪದ ಸಂಗಮ’ ಶೀರ್ಷಿಕೆಯಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲಾಗುವುದು ಎಂದಿದ್ದಾರೆ.



