ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಏಕ ಬಳಕೆ ಪ್ಲ್ಯಾಸ್ಟಿಕ್ ಗೆ ನಿಷೇಧವಿದ್ದರೂ ಇದರ ಬಳಕೆ ನಿರಂತರವಾಗಿದೆ. ರಾಜ್ಯದ ಅಂಗಡಿ ಮುಗ್ಗಟ್ಟುಗಳಲ್ಲಿ ಏಕ ಬಳಕೆ ಪ್ಲ್ಯಾಸ್ಟಿಕ್ ಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಕಳೆದ 2 ವರ್ಷಗಳಲ್ಲಿ 403 ಮೆಟ್ರಿಕ್ ಟನ್ ಏಕ ಬಳಕೆ ಪ್ಲ್ಯಾಸ್ಟಿಕ್‌ಗಳನ್ನು ಜಪ್ತಿ ಮಾಡಲಾಗಿದ್ದು, 1.57 ಕೋಟಿ ದಂಡ ವಿಧಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕೆಲ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ ಸರ್ಕಾರವು 11-3- 2016 ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯನ್ವಯ ಪ್ಲಾಸ್ಟಿಕ್ ಉತ್ಪನ್ನಗಳಾದ ಕ್ಯಾರಿಬ್ಯಾಗ್. ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಡ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದಂತಹ ಮೇಲ್ಕಂಡ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ರಾಜ್ಯಾದ್ಯಂತ ನಿಷೇಧಿಸಿದೆ.
ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ನವದೆಹಲಿ, ಪಾಲಿಸ್ಟೆರೀನ್ ಮತ್ತು ವಿಸ್ತರಿತ ಪಾಲಿಸ್ಟೆರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ. ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 1,2022 ರಿಂದ ಜಾರಿಗೆ ಬರುವಂತೆ ನಿಷೇಧಿಸಿದೆ.


