ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ 42 ಲಕ್ಷ ಮಂದಿಯ ಹೆಸರನ್ನು ತೆಗೆದುಹಾಕಲಾಗಿದೆ.
ಮೊದಲ ಹಂತದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಮಂಗಳವಾರ ಪ್ರಾಥಮಿಕ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಂಬತ್ತು ಲಕ್ಷಕ್ಕೂ ಹೆಚ್ಚು ಮತದಾರರ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಸುಮಾರು 8.4 ಲಕ್ಷ ಮರಣ ಹೊಂದಿದ ಮತದಾರರು, 2.5 ಲಕ್ಷ ನಕಲಿ ಮತದಾರರು, 8.4 ಲಕ್ಷ ಗೈರುಹಾಜರಾತಿ ಮತದಾರರು ಮತ್ತು ನೋಂದಾಯಿತ ವಿಳಾಸಗಳಲ್ಲಿ ಇಲ್ಲದ 22.5 ಲಕ್ಷಕ್ಕೂ ಹೆಚ್ಚು ಮತದಾರರು ಸೇರಿದ್ದಾರೆ. ಅಲ್ಲದೇ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಸಮಯದಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಮತದಾರರ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಮತದಾರರ ಕರಡು ಪಟ್ಟಿಯಿಂದ ಕೈಬಿಟ್ಟಿರುವ ಮತದಾರರು ಸಂಪೂರ್ಣ ಅಥವಾ ಕಡ್ಡಾಯ ಮಾಹಿತಿಯನ್ನು ಒದಗಿಸಲು ವಿಫಲರಾಗಿದ್ದಾರೆ. ನಿಗದಿತ ಸಮಯದೊಳಗೆ ಪ್ರತಿಕ್ರಿಯೆಗಳನ್ನು ಕೋರಿ ಅವರಿಗೆ ನೊಟೀಸ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಮತದಾರರ ಅನುಕೂಲಕ್ಕಾಗಿ ಮತದಾರರ ತೀವ್ರ ಪರಿಷ್ಕರಣೆ ಕಾರ್ಯದ ಅವಧಿಯನ್ನು ಎರಡು ಬಾರಿ ವಿಸ್ತರಿಸಲಾಗಿದೆ. ಕಳೆದ ಅಕ್ಟೋಬರ್ 27ರ ವೇಳೆಗೆ ಒಟ್ಟು 5,74,06,143 ನೋಂದಾಯಿತ ಮತದಾರರಿದ್ದರು. ಅವರ ಸಂಪೂರ್ಣ ಮಾಹಿತಿ ಪಡೆದು ಒಟ್ಟು 5,74,06,140 ಮಂದಿಯ ಹೆಸರನ್ನು ಡಿಜಿಟಲೀಕರಣಗೊಳಿಸಲಾಯಿತು. ಅಪೂರ್ಣ ವಿವರಗಳಿರುವ ಮತದಾರರನ್ನು ಗುರುತಿಸಿ ಮನೆ-ಮನೆ ಪರಿಶೀಲನೆಗಾಗಿ ಅಧಿಕಾರಿಗಳನ್ನು ನಿಯೋಜಿಸಲಾಯಿತು ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ರಾಮ್ ಪ್ರತಾಪ್ ಸಿಂಗ್ ಜಾಡೋನ್, ಮತದಾರರ ಪಟ್ಟಿಯಲ್ಲಿದ್ದ ಸುಮಾರು 8.4 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 22.5 ಲಕ್ಷ ಮತದಾರರು ಸ್ಥಳಾಂತರಗೊಂಡಿದ್ದಾರೆ.2.5 ಲಕ್ಷ ನಕಲಿ ಹೆಸರುಗಳನ್ನೂ ಕಂಡು ಹಿಡಿಯಲಾಗಿದೆ. ಹೆಸರು ಅಳಿಸುವಿಕೆ, ತಿದ್ದುಪಡಿ ಮತ್ತು ಪರಿಶೀಲನೆ ಪ್ರಕ್ರಿಯೆ ಮುಂದುವರಿಯಲಿದೆ.

