ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಭಾರಿ ಗದ್ದಲದಿಂದಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಗಿದೆ. ಡಿಸೆಂಬರ್ 19 ರವರೆಗೆ ನಡೆಯಲಿರುವ ಈ ಅಧಿವೇಶನದ ಆರಂಭವು ಬಿರುಸಿನ ವಾಗ್ವಾದಕ್ಕೆ ಸಾಕ್ಷಿಯಾಯಿತು.
ಕಲಾಪದ ಆರಂಭದಲ್ಲಿ, ಇತ್ತೀಚೆಗೆ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಾಗೂ ಅಂಧರ ಮಹಿಳಾ ಕ್ರಿಕೆಟ್ ಮತ್ತು ಕಬಡ್ಡಿ ತಂಡಗಳಿಗೆ ಇಡೀ ಸದನದಿಂದ ಅಭಿನಂದನೆ ಸಲ್ಲಿಸಲಾಯಿತು. ಆದರೆ, ಈ ಸೌಹಾರ್ದದ ವಾತಾವರಣವು ಹೆಚ್ಚು ಹೊತ್ತು ಉಳಿಯಲಿಲ್ಲ.
ಪ್ರಶ್ನೋತ್ತರ ಅವಧಿಯಲ್ಲೇ ಗದ್ದಲ:
ಅಭಿನಂದನಾ ಪ್ರಕ್ರಿಯೆ ಮುಗಿದು ಪ್ರಶ್ನೋತ್ತರ ಅವಧಿ ಪ್ರಾರಂಭವಾಗುತ್ತಿದ್ದಂತೆ ವಿಪಕ್ಷಗಳು, ಪ್ರಮುಖ ವಿಷಯಗಳಾದ ‘ಎಸ್‌ಐಆರ್’ ಹಾಗೂ ‘ವೋಟ್ ಚೋರಿ’ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆಸಿದವು. ವಿಪಕ್ಷ ಸದಸ್ಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಭಾಧ್ಯಕ್ಷರ ಆಸನದ ಮುಂದಿರುವ ಸದನದ ಬಾವಿಗಿಳಿದು ಘೋಷಣೆ ಕೂಗಿದರು.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಮಧ್ಯಪ್ರವೇಶಿಸಿದ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು, ಸಂಸತ್ತು ಚರ್ಚೆ ಮತ್ತು ಸಂವಾದಗಳಿಗೆ ವೇದಿಕೆಯಾಗಬೇಕು ಎಂದು ಸದಸ್ಯರಿಗೆ ಮನವಿ ಮಾಡಿದರು. ಆದರೆ, ಸ್ಪೀಕರ್ ಅವರ ಮಾತನ್ನು ಲೆಕ್ಕಿಸದೆ ವಿಪಕ್ಷಗಳು ಪ್ರತಿಭಟನೆಯನ್ನು ಮುಂದುವರೆಸಿದವು. ಹೀಗಾಗಿ, ಅನಿವಾರ್ಯವಾಗಿ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.

