Sunday, December 14, 2025

ತನ್ನ ಪ್ರಶಸ್ತಿಯನ್ನು ಸಹ ಆಟಗಾರನಿಗೆ ನೀಡಿದ ಸಿರಾಜ್: ಅಭಿಮಾನಿಗಳಿಂದ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬಿದ್ದಿದ್ದು, ಬಲಿಷ್ಠ ಮುಂಬೈ ತಂಡವನ್ನು ಹೈದರಾಬಾದ್ ತಂಡ ಸುಲಭವಾಗಿ ಮಣಿಸಿದೆ. ಪಂದ್ಯ ಆರಂಭಕ್ಕೂ ಮೊದಲು ಮುಂಬೈ ಮೇಲುಗೈ ಎನ್ನಲಾಗಿದ್ದರೂ, ಹೈದರಾಬಾದ್ ಆಟಗಾರರು ಶಿಸ್ತುಬದ್ಧ ಪ್ರದರ್ಶನದ ಮೂಲಕ ಚಿತ್ರಣವನ್ನೇ ಬದಲಿಸಿದರು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಹೈದರಾಬಾದ್ ನಾಯಕನ ನಿರ್ಧಾರವನ್ನು ಸಾರ್ಥಕಗೊಳಿಸಿದವರು ಮೊಹಮ್ಮದ್ ಸಿರಾಜ್. ಆರಂಭದಿಂದಲೇ ನಿಖರ ಲೈನ್ ಮತ್ತು ಲೆಂಗ್ತ್‌ನೊಂದಿಗೆ ಬೌಲಿಂಗ್ ಮಾಡಿದ ಸಿರಾಜ್, 3.5 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಮೂರು ಪ್ರಮುಖ ವಿಕೆಟ್ ಕಬಳಿಸಿದರು. ಇದರ ಪರಿಣಾಮ ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್ ಸೇರಿದಂತೆ ಮುಂಬೈಯ ಪ್ರಮುಖ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಮುಂಬೈ ತಂಡ 18.5 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು.

132 ರನ್ ಗುರಿ ಬೆನ್ನತ್ತಿದ ಹೈದರಾಬಾದ್‌ಗೆ ಅಮನ್ ರಾವ್ ಹಾಗೂ ತನ್ಮಯ್ ಅಗರ್ವಾಲ್ ಆತ್ಮವಿಶ್ವಾಸದ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 127 ರನ್‌ಗಳ ಜೊತೆಯಾಟ ಮೂಡಿಬಂದಿದ್ದು, ತನ್ಮಯ್ 75 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು. ಅಮನ್ ರಾವ್ ಅಜೇಯ 52 ರನ್‌ಗಳೊಂದಿಗೆ ತಂಡವನ್ನು 11.5 ಓವರ್‌ಗಳಲ್ಲಿ ಜಯದತ್ತ ಕರೆದೊಯ್ದರು. ಹೈದರಾಬಾದ್ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಸಿರಾಜ್, ಆ ಗೌರವವನ್ನು ತನ್ಮಯ್ ಅಗರ್ವಾಲ್‌ಗೆ ನೀಡುವ ಮೂಲಕ ಎಲ್ಲರ ಮನ ಗೆದ್ದರು. ತಮ್ಮ 50 ಸಾವಿರ ರೂ. ಬಹುಮಾನ ಮೊತ್ತವನ್ನು ಸಹ ಆಟಗಾರನಿಗೆ ಹಸ್ತಾಂತರಿಸಿದ ಸಿರಾಜ್ ನಡೆಗೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!