March 1, 2026
Sunday, March 1, 2026
spot_img

ಶಿರಸಿ ಮಾರಿಕಾಂಬಾ ಜಾತ್ರೆ: ಅಶಕ್ತರ ದರುಶನಕ್ಕೆ ‘ಮಾನವೀಯತೆ’ಯ ಸಾರಥ್ಯ!

ಹೊಸದಿಗಂತ ಶಿರಸಿ:

ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಈಗ ಭಕ್ತಿಯ ಪರಾಕಾಷ್ಠೆ. ವಾರಾಂತ್ಯದ ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕಾಗಿ ಹತ್ತಾರು ಗಂಟೆಗಳ ಕಾಲ ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಈ ಜನಸಾಗರದ ನಡುವೆ, ನಡೆದಾಡಲು ಅಶಕ್ತರಾದವರಿಗೆ, ವೃದ್ಧರಿಗೆ ಹಾಗೂ ಅಂಗವಿಕಲರಿಗೆ ದೇವಿಯ ದರ್ಶನ ಮಾಡಿಸಲು ಸ್ವಯಂಸೇವಕರ ತಂಡವೊಂದು ಕೈಗೊಂಡಿರುವ ‘ಮಾನವೀಯ ಸೇವೆ’ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ಜಾತ್ರೆಯ ಗದ್ದಲದಲ್ಲಿ ಅಶಕ್ತರಿಗೆ ತೊಂದರೆಯಾಗಬಾರದೆಂದು ಪ್ರತಿದಿನ ಮಧ್ಯಾಹ್ನ 2ರಿಂದ 5 ಗಂಟೆಯವರೆಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯು ನಗರದ ಐದು ರಸ್ತೆಗಳ ಹಳೆಯ ಲಕ್ಷ್ಮೀ ಟಾಕೀಸ್‌ನಿಂದಲೇ ಆರಂಭವಾಗುತ್ತದೆ:

ಹಳೆಯ ಲಕ್ಷ್ಮೀ ಟಾಕೀಸ್ ಬಳಿಯಿಂದ ಮೂರು ಅಟೋಗಳ ಮೂಲಕ ಭಕ್ತರನ್ನು ಉಚಿತವಾಗಿ ಮಹಾದ್ವಾರದವರೆಗೆ ಕರೆತರಲಾಗುತ್ತದೆ.

ಮಹಾದ್ವಾರದಿಂದ ದೇವಿಯ ಗದ್ದುಗೆಯವರೆಗೆ ಸ್ವಯಂಸೇವಕರು ಭಕ್ತರನ್ನು ವೀಲ್ ಚೇರ್‌ನಲ್ಲಿ ಕುಳ್ಳಿರಿಸಿ, ದರ್ಶನ ಮಾಡಿಸಿ, ಮರಳಿ ಅಟೋ ವರೆಗೆ ಬಿಡುತ್ತಾರೆ.

ಈ ಅಟೋ ಸೇವೆಯನ್ನು ನಗರದ ಸರಾಫ್ ಬಜಾರ್‌ನ ಪ್ರದೀಪ ಎಲ್ಲನಕರ್ ಕಳೆದ ನಾಲ್ಕು ಜಾತ್ರೆಗಳಿಂದ ಪ್ರಾಯೋಜಿಸುತ್ತಿದ್ದಾರೆ. ಅವರಿಗೆ ಅಟೋ ಚಾಲಕರಾದ ಸೋಮಶೇಖರ ಕುರುಬರ, ರಾಜೀವ ನಾಯ್ಕ ಮತ್ತು ಗಣಪತಿ ಬೈಂದೂರು ಸಾಥ್ ನೀಡುತ್ತಿದ್ದಾರೆ.

ವಿಶೇಷವೆಂದರೆ, ಈ ಸೇವಾ ಕಾರ್ಯದಲ್ಲಿ ಸ್ಥಳೀಯರಷ್ಟೇ ಅಲ್ಲದೆ ನಾಗಪುರದಿಂದ ಬಂದ ಗಜಾನನ ಸಾಲೇಹಿತ್ತಲ, ಮುಂಬೈನ ಅಮಿತ್ ಪ್ರಭು ಸೇರಿದಂತೆ ಘನಶ್ಯಾಮ ಪ್ರಭು, ಜೀವನ ಪೈ ಮತ್ತು ಸಂತೋಷ ನಾಯ್ಕ ಅವರ ತಂಡವು ನಿರಂತರವಾಗಿ ವೀಲ್ ಚೇರ್ ಮೂಲಕ ಭಕ್ತರನ್ನು ಕರೆದೊಯ್ಯುತ್ತಿದ್ದಾರೆ. ಪ್ರತಿದಿನ ಸರಾಸರಿ 100 ರಿಂದ 110 ಭಕ್ತರು ಈ ಸೇವೆಯ ಲಾಭ ಪಡೆಯುತ್ತಿದ್ದಾರೆ.

“12 ವರ್ಷಗಳ ಹಿಂದೆ ನನ್ನ ಚಿಕ್ಕಮ್ಮನಿಗೆ ಅನಾರೋಗ್ಯದ ಕಾರಣ ದರ್ಶನ ಮಾಡಿಸಲು ಸಾಧ್ಯವಾಗಿರಲಿಲ್ಲ. ಆ ನೋವೇ ಇಂತಹದೊಂದು ಸೇವೆ ಆರಂಭಿಸಲು ನನಗೆ ಪ್ರೇರಣೆ ನೀಡಿತು.” ಪ್ರದೀಪ ಎಲ್ಲನಕರ್, ಸೇವಾಕರ್ತರು.

ಜಾತ್ರೆಯ ಸಂಭ್ರಮದ ನಡುವೆ, ನಿಸ್ವಾರ್ಥ ಭಾವದಿಂದ ಅಶಕ್ತರಿಗೆ ದೇವಿಯ ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಡುತ್ತಿರುವ ಈ ತಂಡದ ಕಾರ್ಯವು ಭಕ್ತರ ಮನಗೆದ್ದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !