ಹೊಸದಿಗಂತ ಬೆಳಗಾವಿ:
ಸತತ ಪರಿಶ್ರಮ ಮತ್ತು ಶಿಸ್ತಿನ ಅಭ್ಯಾಸವಿದ್ದರೆ ಯಶಸ್ಸು ಅಸಾಧ್ಯವೇನಲ್ಲ ಎಂಬುದನ್ನು ಬೆಳಗಾವಿಯ ಗೋಗಟೆ ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧ್ವನಿ ಸಂತೋಷ ಕುಲಕರ್ಣಿ ಸಾಬೀತುಪಡಿಸಿದ್ದಾರೆ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಬರೋಬ್ಬರಿ ಶೇ. 99.83 (599/600) ಅಂಕಗಳನ್ನು ಪಡೆಯುವ ಮೂಲಕ ಧ್ವನಿ ರಾಜ್ಯಕ್ಕೇ ದ್ವಿತೀಯ ರ್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಧ್ವನಿ ಅವರ ಪ್ರತಿಭೆ ಎಷ್ಟಿದೆ ಎಂದರೆ, ಅವರು ಸಂಸ್ಕೃತ, ಬಿಸಿನೆಸ್ ಸ್ಟಡೀಸ್, ಬೇಸಿಕ್ ಗಣಿತ, ಅಕೌಂಟನ್ಸಿ ಹಾಗೂ ಸ್ಟಾಟಿಸ್ಟಿಕ್ಸ್ ಸೇರಿದಂತೆ ಒಟ್ಟು ಐದು ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿ ದಾಖಲೆ ಬರೆದಿದ್ದಾರೆ. ಇಂಗ್ಲಿಷ್ನಲ್ಲಿ ಕೇವಲ ಒಂದು ಅಂಕ ಕಳೆದುಕೊಂಡು 99 ಅಂಕ ಪಡೆದಿದ್ದಾರೆ.
ಇವರ ತಂದೆ ಸಂತೋಷ ಕುಲಕರ್ಣಿ ಅವರು ಪ್ರಖ್ಯಾತ ತಬಲಾ ವಾದಕರಾಗಿದ್ದು, ಕಳೆದ ಒಂದು ದಶಕದಿಂದ ಕತಾರ್ನಲ್ಲಿ ಸಂಗೀತದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಪಲ್ಲವಿ ಅವರ ಪ್ರೋತ್ಸಾಹ ಹಾಗೂ ಅಕ್ಕ ಸ್ವರ ಅವರ ಮಾರ್ಗದರ್ಶನ ಧ್ವನಿ ಅವರ ಈ ಸಾಧನೆಗೆ ಬೆನ್ನೆಲುಬಾಗಿದೆ. ವಿಶೇಷವೆಂದರೆ, ಧ್ವನಿ ಅವರ ಅಕ್ಕ ಸ್ವರ ಅವರು ಸಹ 2023ರಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಸಾಧಕಿ!
“ದಿನದ ಪಾಠವನ್ನು ಅಂದೇ ಓದುವುದು ನನ್ನ ಯಶಸ್ಸಿನ ಸೀಕ್ರೆಟ್. ಬೆಳಿಗ್ಗೆ ಮತ್ತು ಸಂಜೆ ನಿಗದಿತ ಸಮಯವನ್ನು ಅಭ್ಯಾಸಕ್ಕೆ ಮೀಸಲಿಡುತ್ತಿದ್ದೆ. ಇದರಿಂದ ಪರೀಕ್ಷಾ ಸಮಯದಲ್ಲಿ ಯಾವುದೇ ಒತ್ತಡ ಇರಲಿಲ್ಲ,” ಎಂದು ಧ್ವನಿ ಸಂತಸ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ಕನಂತೆಯೇ ಸಿಎ (CA) ಮಾಡುವ ಗುರಿಯನ್ನು ಹೊಂದಿರುವ ಧ್ವನಿ, ಇಡೀ ರಾಜ್ಯವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.



