ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲಂಬೊದಲ್ಲಿ ನಡೆದ 2026ರ T20 ವರ್ಲ್ಡ್ ಕಪ್ 2026 ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾವನ್ನು 61 ರನ್‌ಗಳಿಂದ ಸೋಲಿಸಿ ಸೆಮಿಫೈನಲ್ ಕನಸನ್ನು ಬಲಪಡಿಸಿದೆ. ಆತಿಥೇಯರಿಗೆ ಇದು ಸತತ ಎರಡನೇ ಸೋಲಾಗಿದ್ದು, ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 168 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆರಂಭಿಕ ಕುಸಿತದ ನಡುವೆಯೇ ಕೋಲ್ ಮೆಕಾಂಚಿ ಮತ್ತು ಮಿಚೆಲ್ ಸ್ಯಾಂಟ್ನರ್ 7ನೇ ವಿಕೆಟ್‌ಗೆ 84 ರನ್‌ಗಳ ದಿಟ್ಟ ಜೊತೆಯಾಟ ನೀಡಿ ತಂಡವನ್ನು ಗಟ್ಟಿದಾರಿಗೆ ತಂದರು. ಕೊನೆಯ ಕ್ಷಣಗಳಲ್ಲಿ ಬಂದ ವೇಗದ ರನ್‌ಗಳು ಕಿವೀಸ್‌ಗೆ ನೆರವಾದವು.
ಇದನ್ನೂ ಓದಿ:
169 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಲ್ಲೇ ಹಿನ್ನಡೆಯಾಯಿತು. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಅವರ ಸ್ಪಿನ್ ಮಂತ್ರಕ್ಕೆ ಲಂಕಾ ಬ್ಯಾಟರ್‌ಗಳು ಸಿಲುಕಿದರು. ಅವರು ನಾಲ್ಕು ಪ್ರಮುಖ ವಿಕೆಟ್ ಕಬಳಿಸಿ ಪಂದ್ಯ ತಿರುವುಮಾಡಿದರು. ಲಂಕಾ 107 ರನ್‌ಗಳಿಗೆ ಸೀಮಿತವಾಯಿತು.
ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ತಲುಪಿದರೆ, ಪಾಕಿಸ್ತಾನದ ಅವಕಾಶಗಳು ಕೇವಲ ಗಣಿತೀಯ ಮಟ್ಟದಲ್ಲೇ ಉಳಿದಿವೆ.



