ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತಿ ಸಣ್ಣ ಜನಸಂಖ್ಯೆಯನ್ನು ಹೊಂದಿರುವ ‘ನಾಮಧಾರಿ ಒಕ್ಕಲಿಗ’ ಸಮುದಾಯವನ್ನು ಹಿಂದುಳಿದ ವರ್ಗಗಳ 2ಎ ಪ್ರವರ್ಗಕ್ಕೆ ಸೇರಿಸುವ ಹೋರಾಟಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಭಾನುವಾರ ಕೆ.ಆರ್. ನಗರದಲ್ಲಿ ಆಯೋಜಿಸಲಾಗಿದ್ದ ನಾಮಧಾರಿ ಸಮುದಾಯ ಭವನದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುವ ಭರವಸೆ ನೀಡಿದರು.
ಸಮುದಾಯದ ಮುಖಂಡರಿಗೆ ಸಲಹೆ ನೀಡಿದ ಸಚಿವರು, “ಹಿಂದುಳಿದ ವರ್ಗಗಳ ಆಯೋಗ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಅರ್ಜಿಗಳು ಮತ್ತು ನಿಮ್ಮ ಬೇಡಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ನನ್ನನ್ನು ಭೇಟಿ ಮಾಡಿ. ನಿಮ್ಮ ಈ ನ್ಯಾಯಯುತ ಹೋರಾಟದಲ್ಲಿ ನಾನು ಪ್ರಾಮಾಣಿಕವಾಗಿ ಭಾಗಿಯಾಗುತ್ತೇನೆ,” ಎಂದು ಆಶ್ವಾಸನೆ ನೀಡಿದರು.
“ನಾವು ಸಣ್ಣ ಸಂಖ್ಯೆಯಲ್ಲಿದ್ದೇವೆ ಎಂಬ ಆತಂಕ ಅಥವಾ ನೋವು ಬೇಡ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮ ಸಮುದಾಯ ಮುಂಚೂಣಿಗೆ ಬರಬೇಕು. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಎಲ್ಲವನ್ನೂ ಸರಿಪಡಿಸುವ ಪ್ರಯತ್ನ ಮಾಡುತ್ತೇವೆ,” ಎಂದು ಸಮುದಾಯಕ್ಕೆ ಧೈರ್ಯ ತುಂಬಿದರು.
“ಕೆಲವರು ಹಿಂದುಳಿದ ವರ್ಗಗಳ ನಾಯಕರು ಎಂದು ಕೇವಲ ಪ್ರಚಾರ ಪಡೆಯುತ್ತಾರೆ. ಆದರೆ, ವಾಸ್ತವದಲ್ಲಿ ಸಣ್ಣ ಸಮುದಾಯಗಳನ್ನು ಗುರುತಿಸಿ ಬೆಳೆಸಿದವರು ದೇವೇಗೌಡರು,” ಎಂದು ಹೇಳುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದರು.

