Friday, December 12, 2025

ಲೋಕಸಭೆಯಲ್ಲಿ ನಿಷೇಧಿತ ಇ-ಸಿಗರೇಟ್ ಸೇವನೆ? ಟಿಎಂಸಿ ಸಂಸದನ ವಿರುದ್ಧ ಗಂಭೀರ ಆರೋಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ ಸಂಸದರೊಬ್ಬರು ಇ-ಸಿಗರೇಟ್ ಸೇದುತ್ತಿರುವುದನ್ನ ನಾನು ನೋಡಿದೆ. ಆದ್ರೆ ಇ-ಸಿಗರೇಟ್‌ ದೇಶದಲ್ಲಿ ನಿಷೇಧಿಸಲಾಗಿದೆ ಅನ್ನೋದು ಗಮನಿಸಬೇಕಾದ ಅಂಶ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ನಿಷೇಧ ಇದೆಯಾದರೂ, ಲೋಕಸಭೆಯಲ್ಲಿ ಅದನ್ನು ಸೇದಲು ಸ್ಪೀಕರ್‌ ಪರವಾನಗಿ ನೀಡಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ದಯವಿಟ್ಟು ಇದನ್ನು ತಕ್ಷಣವೇ ತನಿಖೆ ಮಾಡಿ ಎಂದು ಮನವಿ ಮಾಡಿದರು.

ನಾನು ಸಂಸದರ ಹೆಸರು ಹೇಳಲು ಇಷ್ಟಪಡುವುದಿಲ್ಲ. ನಾನು ಕೇವಲ ಅವರು ಸೇರಿದ ಪಕ್ಷದ ಹೆಸರನ್ನಷ್ಟೇ ಉಲ್ಲೇಖಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಗದ್ದಲ ಶುರುವಾಗುತ್ತಿದ್ದಂತೇ ಮಧ್ಯಪ್ರವೇಶಿಸಿದ ಸ್ಪೀಕರ್‌ ಓಂ ಬಿರ್ಲಾ, ಯಾವುದೇ ಪಕ್ಷದ ಸಂಸದರಿರಲಿ, ಅವರು ಸದನದ ಘನತೆ ಕಾಪಾಡಿಕೊಳ್ಳಬೇಕು. ಒಂದು ವೇಳೆ ಸಂಸದರು ಇ-ಸಿಗರೇಟ್‌ ಸೇದಿರುವುದು ಸಾಬೀತಾದ್ರೆ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಎಚ್ಚರಿಸಿದರು.

ನಾವು ಸಂಸದೀಯ ಸಂಪ್ರದಾಯಗಳು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು. ಅಂತಹ ವಿಷಯಗಳು ನನ್ನ ಗಮನಕ್ಕೆ ಬಂದರೆ, ನಾನು ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್‌ ಓಂ ಬಿರ್ಲಾ ಭರವಸೆ ನೀಡಿದರು.

ಈ ಬಗ್ಗೆ ಅನುರಾಗ್‌ ಠಾಕೂರ್‌ ಮತ್ತು ಇತರ ಬಿಜೆಪಿ ಸಂಸದರು ಸ್ಪೀಕರ್‌ ಅವರಿಗೆ ಲಿಖಿತ ದೂರು ಸಲ್ಲಿಸುವ ನಿರೀಕ್ಷೆ ಇದೆ.

error: Content is protected !!