ಹೊಸದಿಗಂತ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಇಂತಹ ಸುಳ್ಳು ಸುದ್ದಗಳಿಗೆ ಕಿವಿಗೊಡಬಾರದು ಎಂದು ಕೊಡಗು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಅಡುಗೆ ಅನಿಲದ ದಾಸ್ತಾನು ಸಮರ್ಪಕವಾಗಿದ್ದು, ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗ್ರಾಹಕರು ಆತಂಕಕ್ಕೆ ಒಳಗಾಗಿ ಅನಗತ್ಯವಾಗಿ ಹೆಚ್ಚಿನ ಸಿಲಿಂಡರ್ ಕಾಯ್ದಿರಿಸುವ ಅಗತ್ಯವಿಲ್ಲ, ಬದಲಿಗೆ ಅಗತ್ಯವಿರುವಷ್ಟು ಮಾತ್ರ ಬುಕ್ ಮಾಡಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಎಲ್‌ಪಿಜಿ ವಿತರಕರೊಂದಿಗೆ ಈಗಾಗಲೇ ಜಿಲ್ಲಾಡಳಿತ ಸಮಾಲೋಚನೆ ನಡೆಸಿದೆ. ಎಂದಿನಂತೆ ವಿತರಕರು ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಲಿದ್ದಾರೆ. ವಿತರಕರು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಗ್ಯಾಸ್ ವಿತರಣೆಯಲ್ಲಿ ವಿಳಂಬ ಅಥವಾ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ದೂರು ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.
| ಕಚೇರಿ / ವಿಭಾಗ | ದೂರವಾಣಿ ಸಂಖ್ಯೆ |
| ಉಪ ನಿರ್ದೇಶಕರ ಕಚೇರಿ, ಆಹಾರ ಇಲಾಖೆ | 9845706980 |
| ಮಾರಾಟ ವ್ಯವಸ್ಥಾಪಕರು (IOC) | 9585515389 |
| ಮಾರಾಟ ವ್ಯವಸ್ಥಾಪಕರು (BPC) | 9853735944 |
| ಸಹಾಯಕ ಮಾರಾಟ ವ್ಯವಸ್ಥಾಪಕರು (HPC) | 7001642556 |
ತಾಲೂಕುವಾರು ಸಹಾಯವಾಣಿ:
ಮಡಿಕೇರಿ: 9480544531
ವಿರಾಜಪೇಟೆ: 8105072869
ಸೋಮವಾರಪೇಟೆ: 9480072632
ಕುಶಾಲನಗರ: 9380032721
ಪೊನ್ನಂಪೇಟೆ: 9108940875
ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಡುವುದು ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ‘ಅಗತ್ಯ ವಸ್ತುಗಳ ಕಾಯ್ದೆ’ಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.



