ಸಂಜೆ ಚಹಾ ಜೊತೆಗೆ ಸವಿಯಲು ಅವಲಕ್ಕಿ ವಡೆ ಒಂದು ಆರೋಗ್ಯಕರ ಹಾಗೂ ರುಚಿಕರ ಆಯ್ಕೆ. ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಈ ವಡೆ ಎಲ್ಲರಿಗೂ ಇಷ್ಟವಾಗುತ್ತೆ ನೋಡಿ.
ಬೇಕಾಗುವ ಸಾಮಗ್ರಿಗಳು
ಅವಲಕ್ಕಿ – 2 ಕಪ್
ಹಸಿರು ಮೆಣಸಿನಕಾಯಿ – 2
ಈರುಳ್ಳಿ – 1
ಕ್ಯಾರೆಟ್ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಶುಂಠಿ – 1 ಚಮಚ (ತುರಿದುದು)
ಜೀರಿಗೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅಕ್ಕಿಹಿಟ್ಟು – 2 ಚಮಚ
ಎಣ್ಣೆ – ಕರಿಯಲು
ತಯಾರಿಸುವ ವಿಧಾನ
ಮೊದಲು ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ಸ್ವಲ್ಪ ಸಮಯ ಮೃದುವಾಗಲು ಬಿಡಿ. ನಂತರ ನೀರನ್ನು ಚೆನ್ನಾಗಿ ಹಿಂಡಿ ಅವಲಕ್ಕಿಯನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ. ಇದಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಶುಂಠಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ಗಟ್ಟಿಯಾಗಲು ಅಕ್ಕಿಹಿಟ್ಟನ್ನು ಸೇರಿಸಿ.
ಈ ಮಿಶ್ರಣದಿಂದ ಚಿಕ್ಕ ಚಿಕ್ಕ ವಡೆಗಳಾಗಿ ಆಕಾರ ನೀಡಿ. ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೂ ಹುರಿಯಿರಿ. ಹುರಿದ ಅವಲಕ್ಕಿ ವಡೆಗಳನ್ನು ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಬಿಸಿ ಬಿಸಿಯಾಗಿ ಸವಿಯಿರಿ.

