ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಈಗ ನಿಗೂಢ ತಿರುವು ಪಡೆದುಕೊಂಡಿದೆ. ಉತ್ಖನನದ ವೇಳೆ ಹಾವುಗಳು ಕಾಣಿಸಿಕೊಂಡ ಬೆನ್ನಲ್ಲೇ, ‘ನಿಧಿಯನ್ನು ಹಾವು ಕಾಯುತ್ತವೆ’ ಎಂಬ ಗ್ರಾಮಸ್ಥರ ಆತಂಕ ದೂರ ಮಾಡಲು ಮೈಸೂರಿನ ಖ್ಯಾತ ಉರಗ ರಕ್ಷಕ ಸ್ನೇಕ್ ಶಿವರಾಜು ನೇತೃತ್ವದ ತಂಡ ಲಕ್ಕುಂಡಿಗೆ ಧಾವಿಸಿದೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮೂರನೇ ದಿನದ ಉತ್ಖನನ ನಡೆಯುತ್ತಿದ್ದಾಗ ಹಾವೊಂದು ಪ್ರತ್ಯಕ್ಷವಾಗಿತ್ತು. ಇದರಿಂದ ಜೆಸಿಬಿ ಚಾಲಕ ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ನಿಧಿಯ ಆಸೆಗೆ ಹೋದವರು ಹಿಂದೆ ರಕ್ತಕಾರಿ ಸತ್ತಿದ್ದಾರೆ ಎಂಬ ಸ್ಥಳೀಯರ ನಂಬಿಕೆ ಮತ್ತು ‘ಸರ್ಪಗಳು ನಿಧಿ ಕಾಯುತ್ತವೆ’ ಎಂಬ ಭೀತಿಯ ಹಿನ್ನೆಲೆಯಲ್ಲಿ ಅರಣ್ಯ ಪರಿಸರ ವನ್ಯಜೀವಿ ಸಮಾಜದ ತಂಡ ಸ್ಥಳ ಪರಿಶೀಲನೆ ನಡೆಸಿತು.
ಕೂದಲಿರುವ ಹಾವು ಅಥವಾ ಹಲವು ತಲೆಗಳ ಹಾವು ಕೇವಲ ಕಾಲ್ಪನಿಕ. ನಿಧಿಯನ್ನು ಹಾವು ಕಾಯುತ್ತದೆ ಎಂಬುದು ಕೇವಲ ಭ್ರಮೆ. ಕಳೆದ 20 ವರ್ಷಗಳ ಅನುಭವದಲ್ಲಿ ಇಂತಹ ಘಟನೆ ನಮಗೆ ಕಂಡಿಲ್ಲ. ಹಾವು ಕಂಡರೆ ಹೊಡೆಯಬೇಡಿ, ಉರಗ ರಕ್ಷಕರಿಗೆ ಮಾಹಿತಿ ನೀಡಿ ಎಂದು ಜನರಲ್ಲಿ ಅರಿವು ಮೂಡಿಸಿದರು.


