ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಜನರಲ್ಲಿ ಭಯ ಹಾಗೂ ಆತಂಕ ಮೂಡಿಸುವ ರೀತಿಯಲ್ಲಿ ತಲ್ವಾರ್ ಹಿಡಿದು ರೀಲ್ಸ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ ಇಬ್ಬರು ವ್ಯಕ್ತಿಗಳನ್ನು ಮಂಗಳೂರು ನಗರದ ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ
ಡಿಸೆಂಬರ್ 13 ರಂದು ಫೇಸ್‌ಬುಕ್‌ನಲ್ಲಿ ಈ ವಿವಾದಾತ್ಮಕ ವಿಡಿಯೋ ಹರಿದಾಡುತ್ತಿತ್ತು. ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋವನ್ನು ‘Suresh Psy’ ಎಂಬ ಫೇಸ್‌ಬುಕ್ ಖಾತೆಯು ಶೇರ್ ಮಾಡಿತ್ತು. ತಲ್ವಾರ್ ಹಿಡಿದು ಡ್ಯಾನ್ಸ್ ಮಾಡುವ ರೀಲ್ಸ್ ಮಾಡಿದ್ದ ವ್ಯಕ್ತಿಯನ್ನು ಅಮೀರ್ ಸುಹೇಲ್ ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನು ಕಾವೂರು ನಿವಾಸಿ ಸುರೇಶ್ ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ಲೈಕ್ ಮತ್ತು ಹಾರ್ಟ್ ಎಮೋಜಿಗಳೊಂದಿಗೆ ಸ್ಟೋರಿ ರೂಪದಲ್ಲಿ ಪೋಸ್ಟ್ ಮಾಡಿ ಪ್ರಚಾರ ನೀಡಿದ್ದ.
ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಆರೋಪದ ಹಿನ್ನೆಲೆಯಲ್ಲಿ ಕಾವೂರು ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 352(2), ಬಿಎನ್ಎಸ್–2023ರ ಕಲಂ 4 ಮತ್ತು 25(1B), ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಐಟಿ ಕಾಯ್ದೆ ಕಲಂ 11 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ರೀಲ್ಸ್‌ಗೆ ಬಳಸಿದ್ದ ತಲ್ವಾರ್ ಮತ್ತು ವಿಡಿಯೋ ಪೋಸ್ಟ್ ಮಾಡಲು ಬಳಸಿದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪಾಯಕಾರಿ ಮತ್ತು ಭಯಾನಕ ವಿಷಯಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

