February 10, 2026
Tuesday, February 10, 2026
spot_img

ಸೋಶಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್ ರೇಷ್ಮಾ ಆತ್ಮಹತ್ಯೆ: ಮಗಳ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತಂದೆ

ಹೊಸ ದಿಗಂತ ವರದಿ,ಕಾಸರಗೋಡು:

ಸಾಮಾಜಿಕ ಮಾಧ್ಯಮದಲ್ಲಿ ಚಿನ್ನು ಪಾಪು ಎಂದು ಕರೆಯಲ್ಪಡುವ ರೇಷ್ಮಾ (೨೫) ಕಾಸರಗೋಡಿನ ಚೂರಿಯಲ್ಲಿರುವ ಬಾಡಿಗೆ ಕ್ವಾರ್ಟರ್‍ಸ್‌ನಲ್ಲಿ ಶವವಾಗಿ ಸೋಮವಾರ ಪತ್ತೆಯಾಗಿದ್ದಾರೆ.

ರೇಷ್ಮಾ ಅವರು ವಾಸಿಸುತ್ತಿದ್ದ ಕ್ವಾರ್ಟರ್‍ಸ್‌ನ ಬಾಗಿಲು ತೆರೆದಿರುವುದನ್ನು ನೆರೆಮನೆಯವರು ನೋಡಿದಾಗ ಕೋಣೆಯಲ್ಲಿ ರೇಷ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.

ರೇಷ್ಮಾ ತನ್ನ 18 ನೇ ವಯಸ್ಸಿನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡಿನ ವಿವಿಧ ಭಾಗಗಳ ಭಾಷೆ, ಗ್ರಾಮೀಣ ಶೈಲಿಯ ಆಹಾರ ತಯಾರಿ, ಸಂಚಾರ ವಿಶೇಷತೆಗಳನ್ನು ರೇಷ್ಮಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದರು.

ಕನ್ನಡ, ಮಲೆಯಾಳ, ತುಳು, ಕೊಂಕಣಿ ಮೊದಲಾದ ಭಾಷೆಗಳಲ್ಲಿ ಅವರು ತಮ್ಮ ವಿಡಿಯೋಗಳನ್ನು ಪ್ರದರ್ಶಿಸುತ್ತಿದ್ದರು. ರೇಷ್ಮಾರಿಗೆ ಎರಡು ಲಕ್ಷಕ್ಕಿಂತಲೂ ಹೆಚ್ಚು ಹಿಂಬಾಲಕರಿದ್ದಾರೆ. ಸಾಮಾಜಿಕ ಜಾಲತಾಣಗಳ ಜೊತೆಗೆ ಧಾರಾವಾಹಿಗಳಲ್ಲೂ ರೇಷ್ಮಾ ಅಭಿನಯಿಸಿದ್ದಾರೆ. ಅವರು ಅಭಿಮಾನಿಗಳ ಪ್ರಚಾರದ ವಿಡಿಯೋಗಳು ಮತ್ತು ಶೂಟಿಂಗ್‌ನ ಭಾಗವಾಗಿ ಪ್ರಯಾಣಿಸುವಾಗ ಅವರು ಸಾಮಾನ್ಯವಾಗಿ ತನ್ನ ಪುತ್ರನನ್ನು ಅದೂರು ಆಲಂತಡ್ಕದಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ಪೋಷಕರೊಂದಿಗೆ ಬಿಟ್ಟು ಹೋಗುತ್ತಿದ್ದರು. ಘಟನೆಯ ದಿನ ಅವರ ಪುತ್ರ ಆದೂರು ಆತಂತಡ್ಕದ ಮನೆಯಲ್ಲೇ ಇದ್ದನು. ರೇಷ್ಮಾ ಸಾವಿಗೆ ಮುನ್ನ ಯಾವುದೇ ಅಸಾಮಾನ್ಯ ಸಂದೇಶಗಳು ಅಥವಾಫೋನ್ ಕರೆಗಳು ಬಂದಿಲ್ಲ ಎಂದು ಅವರ ಸಹೋದರ ರಂಜಿತ್ ಸ್ಪಷ್ಟಪಡಿಸಿದ್ದಾರೆ.

ರೇಷ್ಮಾ ಅವರ ತಂದೆ ಮತ್ತು ಜೀಪ್ ಚಾಲಕ ಗಂಗಾಧರ ಮತ್ತು ಕಿರಿಯ ಸಹೋದರ ರಂಜಿತ್ ಅವರು ಸಾವಿನ ಬಗ್ಗೆ ವಿವರವಾದ ತನಿಖೆಗೆ ಒತ್ತಾಯಿಸಿದ್ದಾರೆ.

ವಿಚ್ಛೇದನ ಮತ್ತು ಒಂಟಿತನ
ಪ್ರೀತಿಸಿ ಮದುವೆಯಾದ ರೇಷ್ಮಾ ಮತ್ತು ಅವರ ಪತಿ ಪ್ರಜ್ವಲ್, ಒಂದು ತಿಂಗಳ ಹಿಂದೆ ಕೌಟುಂಬಿಕ ನ್ಯಾಯಾಲಯದ ಮೂಲಕ ಅಧಿಕೃತವಾಗಿ ಬೇರ್ಪಟ್ಟರು. ಅವರು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ನಾಲ್ಕು ವರ್ಷದ ಬಿಹಾನ್ ಎಂಬ ಪುತ್ರನಿದ್ದಾನೆ. ವಿಚ್ಛೇದನದ ನಂತರ ರೇಷ್ಮಾ ಮಾನಸಿಕವಾಗಿ ದಣಿದಿದ್ದರೂ ಅದನ್ನು ವ್ಯಕ್ತಪಡಿಸದೆ ಮುಂದುವರಿಯಲು ಪ್ರಯತ್ನಿಸಿದರು ಎಂದು ಅವರ ತಂದೆ ಹೇಳಿದ್ದಾರೆ. ಕೆಲಸಕ್ಕೆ ಸಂಬಂಧಿಸಿದ ಅನುಕೂಲಕ್ಕಾಗಿ ರೇಷ್ಮಾ ಕಾಸರಗೋಡು ನಗರ ಪೋಲೀಸ್ ಠಾಣೆ ವ್ಯಾಪ್ತಿಯ ಚೂರಿ ಪ್ರದೇಶದಲ್ಲಿ ಬಾಡಿಗೆ ಕ್ವಾರ್ಟರ್‍ಸ್‌ನಲ್ಲಿ ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದಳು.


ಪ್ರಕರಣ ದಾಖಲಿಸಿದ ಪೊಲೀಸರು
ಕಾಸರಗೋಡು ನಗರ ಪೊಲೀಸರು ಘಟನೆಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದಾರೆ. ರೇಷ್ಮಾ ಸಾವಿಗೆ ಬೇರೆ ಯಾವುದೇ ಕಾರಣಗಳಿವೆಯೇ ಎಂದು ಪೊಲೀಸರು ವಿವರವಾಗಿ ತನಿಖೆ ನಡೆಸುತ್ತಿದ್ದಾರೆ.

ಇನ್ ಸ್ಟಾಗ್ರಾಮ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ರೇಷ್ಮಾ ಅವರ ಪ್ರಚಾರದ ವೀಡಿಯೋಗಳಿಗೆ ಸಂಬಂಧಿಸಿದ ಒತ್ತಡಗಳು ತನಿಖೆಯ ವ್ಯಾಪ್ತಿಗೆ ಬರುತ್ತವೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತರು ತಾಯಿ ಶೈಲಜಾ, ಸಹೋದರರಾದ ರತೀಶ್, ರಂಜಿತ್ ಅವರನ್ನು ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಲಭಿಸಿದ ಬಳಿಕವೇ ಸಾವಿಗೆ ಸ್ಪಷ್ಟ ಕಾರಣದ ತಿಳಿಯಬಹುದು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !