ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಸರಕಾರ ಜಾರಿಗೆ ತಂದಿರುವ ಹೊಸ ಸಾಮಾಜಿಕ ಮಾಧ್ಯಮ ಪರಿಶೀಲನೆ ನೀತಿ ಭಾರತೀಯ H-1B ವೀಸಾ ಅಭ್ಯರ್ಥಿಗಳಿಗೆ ಅಚಾನಕ್ ಸಂಕಷ್ಟ ತಂದಿದೆ. ಈಗಾಗಲೇ ನಿಗದಿಯಾಗಿದ್ದ ಹಲವು ವೀಸಾ ಸಂದರ್ಶನಗಳನ್ನು ಮುಂದಿನ ವರ್ಷಕ್ಕೆ ಮುಂದೂಡುವ ಅನಿವಾರ್ಯತೆ ಉಂಟಾಗಿದ್ದು, ನೇಮಕಾತಿ ಪ್ರಕ್ರಿಯೆಯಲ್ಲೂ ವಿಳಂಬ ಕಂಡುಬಂದಿದೆ.
ಈ ಬೆಳವಣಿಗೆ ಬಗ್ಗೆ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿ ವೀಸಾ ಅರ್ಜಿದಾರರಿಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ರಾಯಭಾರ ಕಚೇರಿಯಿಂದ ಬಂದ ಇಮೇಲ್‌ನಲ್ಲಿ ವೀಸಾ ಅಪಾಯಿಂಟ್‌ಮೆಂಟ್ ಮರುನಿಗದಿಯಾಗಿರುವ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.
ಡಿಸೆಂಬರ್ ಮಧ್ಯದಿಂದ ಅಂತ್ಯದವರೆಗೆ ನಿಗದಿಯಾಗಿದ್ದ ಅನೇಕ ಸಂದರ್ಶನಗಳನ್ನು ಈಗ ಮಾರ್ಚ್‌ಗೆ ಮುಂದೂಡಲಾಗಿದೆ. ಈ ನಡುವೆ H-1B ವೀಸಾ ಅರ್ಜಿದಾರರು ಹಾಗೂ ಅವರ H-4 ಅವಲಂಬಿತರಿಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರ ತಪಾಸಣೆ ವ್ಯಾಪ್ತಿಯನ್ನು ವಿಸ್ತರಿಸಿದೆ. ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳ ಗೌಪ್ಯತಾ ಸೆಟ್ಟಿಂಗ್‌ಗಳನ್ನು ‘ಪಬ್ಲಿಕ್’ಗೆ ಇಡುವಂತೆ ಸೂಚಿಸಲಾಗಿದೆ.
ಡಿಸೆಂಬರ್ 15ರಿಂದ ಅರ್ಜಿದಾರರ ಆನ್‌ಲೈನ್ ಚಟುವಟಿಕೆಗಳನ್ನು ಪರಿಶೀಲಿಸಲಾಗುತ್ತದೆ. ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆಗೆ ಅಪಾಯವಿರುವ ಅಂಶಗಳನ್ನು ಗುರುತಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

