ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಇ-ಶ್ರಮ್ ಪೋರ್ಟಲ್ ನಲ್ಲಿ ಈವರೆಗೆ 31 ಕೋಟಿಗೂ ಹೆಚ್ಚು ಕಾರ್ಮಿಕರು ನೋಂದಣಿಯಾಗಿದ್ದಾರೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಡಾ. ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
ರಾಜ್ಯಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು, ದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ- ILO ವರದಿ ಅನುಸಾರ ಕಳೆದೊಂದು ದಶಕದಲ್ಲಿ ಸಾಮಾಜಿಕ ಭದ್ರತೆ ಶೇಕಡ 64ರಷ್ಟು ಹೆಚ್ಚಳವಾಗಿದ್ದು, ದೇಶದ 94 ಕೋಟಿ ಜನರು ಈ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ ಎಂದರು.
ವಿವಿಧ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವುದು ಇ-ಶ್ರಮ್ ಪೋರ್ಟಲ್ ಉದ್ದೇಶವಾಗಿದ್ದು, ಇದಕ್ಕಾಗಿ ಸಮಗ್ರ ದತ್ತಾಂಶ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ನೂತನ ಕಾರ್ಮಿಕ ವಿಧಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಸಂಘಟಿತ ಕಾರ್ಮಿಕ ಕನಿಷ್ಠ ವೇತನದ ಬಗ್ಗೆ ಸರ್ಕಾರ ಕೇವಲ ಸಲಹೆ ನೀಡಬಹುದಾಗಿದ್ದು, ಆದರೆ ನೂತನ ವಿಧಿ ಅನುಸಾರ ಕನಿಷ್ಠ ವೇತನ ಮಿತಿ ಕಡ್ಡಾಯ ಎಂದರು.
ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ದೇಶದಲ್ಲಿ ಗ್ರಂಥಾಲಯ ಮೂಲಸೌಕರ್ಯ ವೃದ್ಧಿಗೆ ಕೇಂದ್ರ ಸಕಲ ಕ್ರಮ ಕೈಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಓದುವ ಹವ್ಯಾಸ ಬೆಳೆಸಲು ಹಲವು ಪ್ರಯತ್ನ ನಡೆಸಿದೆ ಎಂದರು ರಾಷ್ಟ್ರೀಯ ಗ್ರಂಥಾಲಯ ಮಿಷನ್ ಯೋಜನೆಯಡಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗ್ರಂಥಾಲಯ ಮೂಲಸೌಕರ್ಯ ವೃದ್ಧಿಗೆ ಅಗತ್ಯ ಅನುದಾನ ನೀಡಲಾಗಿದೆ ಎಂದರು.



