February 6, 2026
Friday, February 6, 2026
spot_img

ವಿಮಾನದಲ್ಲಿ ಗಗನಸಖಿ ಜೊತೆ ಅನುಚಿತ ವರ್ತನೆ: ಸಾಫ್ಟ್‌ವೇರ್ ಉದ್ಯೋಗಿ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನಿಂದ ಹೈದರಾಬಾದ್‌ಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕೇರಳ ಮೂಲದ ಸಾಫ್ಟ್‌ವೇರ್ ಉದ್ಯೋಗಿಯನ್ನು ಭಾನುವಾರ ಬಂಧಿಸಲಾಗಿದೆ.

ವಿಮಾನದ ಕ್ಯಾಬಿನ್​ ಸಿಬ್ಬಂದಿ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿದ ಬಳಿಕ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ವಿಮಾನದ ಸಿಬ್ಬಂದಿ ನೀಡಿದ ದೂರಿನ ಪ್ರಕಾರ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಇಳಿದ ಬಳಿಕ ತನ್ನ ಸೀಟಿನಲ್ಲಿ ಪಾಸ್‌ಪೋರ್ಟ್ ಬಿದ್ದಿದೆ ಎಂದು ಗಗನಸಖಿಗೆ ತಿಳಿಸಿದ್ದಾನೆ. ಸಿಬ್ಬಂದಿ ಅದನ್ನು ಹುಡುಕಲು ಮರಳಿ ವಿಮಾನದೊಳಗೆ ಹೋದಾಗ, ಅವರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾನೆ. ಅಶ್ಲೀಲ ಮತ್ತು ನಿಂದನೀಯ ಪದಗಳನ್ನು ಬಳಸಿದ್ದಾನೆ.30ರ ಪ್ರಾಯದ ಆರೋಪಿ ಪ್ರಯಾಣಿಕ ಮದ್ಯ ಅಥವ ಮಾದಕ ವ್ಯಸನಿಯಂತೆ ಕಂಡುಬಂದಿದ್ದಾನೆ. ಪಾಸ್​ಪೋರ್ಟ್​ ಹುಡುಕುತ್ತಿದ್ದಾಗ ಗಗನಸಖಿಯ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ವಿಮಾನದ ಕ್ಯಾಪ್ಟನ್ ಮತ್ತು ನಿಲ್ದಾಣದ ಸಿಬ್ಬಂದಿಗೆ ಈ ವಿಷಯವನ್ನು ತಿಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಆಧಾರದ ಮೇಲೆ, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್​ಎಸ್)​ ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !