ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಣಿ ಟ್ವೀಟ್‌ಗಳು ಸಂಚಲನ ಮೂಡಿಸಿವೆ. ಒಂದೆಡೆ ಮುಡಾ ಹಗರಣದ ಸುತ್ತ ವಿಪಕ್ಷಗಳ ಮುತ್ತಿಗೆ, ಇನ್ನೊಂದೆಡೆ ಸ್ವಪಕ್ಷದ ಶಾಸಕರಿಂದಲೇ ‘ಡಿಕೆಶಿ ಮುಂದಿನ ಸಿಎಂ’ ಎಂಬ ಘೋಷಣೆ ಈ ಎರಡೂ ಬೆಳವಣಿಗೆಗಳ ನಡುವೆ ಸಿದ್ದರಾಮಯ್ಯ ತಮ್ಮ ರಾಜಕೀಯ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯನ್ನು ಸಾರುವ ಮೂಲಕ ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ತಮ್ಮ ನಾಲ್ಕು ದಶಕಗಳ ರಾಜಕೀಯ ಪಯಣವನ್ನು ಸ್ಮರಿಸಿರುವ ಸಿಎಂ, “ನನ್ನ ಹಾದಿ ಎಂದಿಗೂ ಸುಗಮವಾಗಿರಲಿಲ್ಲ. ಕುರಿ ಕಾಯುತ್ತಿದ್ದವನು ಮುಖ್ಯಮಂತ್ರಿಯಾದದ್ದು ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಕೆಂಪಾಗಲು ಕಾರಣವಾಗಿದೆ,” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ತಮ್ಮ ಮೇಲಿನ ಟೀಕೆ ಮತ್ತು ಆರೋಪಗಳಿಗೆ ಕೇವಲ ರಾಜಕೀಯವಲ್ಲ, ತಾವು ಹುಟ್ಟಿದ ಜಾತಿಯೂ ಒಂದು ಕಾರಣ ಎಂದು ಹೇಳುವ ಮೂಲಕ ‘ಅಹಿಂದ’ ಅಸ್ತ್ರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.
ತಮ್ಮನ್ನು ರಾಜಕೀಯವಾಗಿ ಮುಗಿಸಲು ದೊಡ್ಡ ನಾಯಕರು ಕುಟಿಲ ತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿರುವ ಅವರು, “ನಿಮ್ಮೆಲ್ಲರ ಬೆಂಬಲ ಇರುವವರೆಗೆ ನಾನು ಉಸಿರಿರುವ ತನಕ ಹೋರಾಡುತ್ತೇನೆ. ಈ ರಣರಂಗ ಬಿಟ್ಟು ಓಡಿಹೋಗುವ ಹೇಡಿ ನಾನಲ್ಲ,” ಎಂದು ಸವಾಲು ಹಾಕಿದ್ದಾರೆ.



