Saturday, November 1, 2025

ಭಾರತ-ಇರಾನ್ ವ್ಯಾಪಾರಕ್ಕೆ ಕೊಂಚ ರಿಲೀಫ್! ಚಾಬಹಾರ್‌ ಬಂದರಿನ ಮೇಲಿನ ನಿರ್ಬಂಧ ಸಡಿಲಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇರಾನ್ ಸಹಭಾಗಿತ್ವದಲ್ಲಿ ನಿರ್ಮಿತವಾದ ‘ಚಾಬಹಾರ್ ಬಂದರು’ ಮೇಲೆ ವಿಧಿಸಿದ್ದ ನಿರ್ಬಂಧಗಳಿಗೆ ಅಮೆರಿಕ ಸರ್ಕಾರವು ಆರು ತಿಂಗಳ ಕಾಲ ವಿನಾಯಿತಿ ನೀಡಿದೆ. ಪಾಕಿಸ್ತಾನವನ್ನು ಬಿಟ್ಟು ಅಫಘಾನಿಸ್ತಾನ ಹಾಗೂ ಮಧ್ಯ ಏಷ್ಯಾದ ರಾಷ್ಟ್ರಗಳತ್ತ ಭಾರತದ ವ್ಯಾಪಾರ ಮಾರ್ಗವನ್ನು ತೆರೆದಿಟ್ಟಿರುವ ಈ ಬಂದರು, ಭಾರತದ ವಿದೇಶಾಂಗ ನೀತಿಯಲ್ಲಿ ಅತ್ಯಂತ ತಂತ್ರಜ್ಞಾನಪೂರ್ಣ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಅಮೆರಿಕದ ನಿರ್ಬಂಧದಿಂದ ಬಂದರು ಯೋಜನೆ ಸ್ಥಗಿತಗೊಂಡಿದ್ದರೂ, ಇದೀಗ ಅದರ ಕಾರ್ಯಚಟುವಟಿಕೆ ಪುನಃ ಆರಂಭಿಸಲು ಅವಕಾಶ ದೊರೆತಿದೆ. ಈ ಕುರಿತು ವಕ್ತಾರ ರಣಧೀರ್ ಜೈಸ್ವಾಲ್ ಮಾಹಿತಿ ನೀಡಿದ್ದು, “ಹಲವು ಸುತ್ತಿನ ಮಾತುಕತೆಗಳ ಬಳಿಕ ಚಾಬಹಾರ್ ಬಂದರು ವ್ಯವಹಾರಗಳ ಮೇಲೆ ವಿಧಿಸಲಾದ ನಿರ್ಬಂಧಗಳಿಗೆ ಆರು ತಿಂಗಳ ವಿನಾಯಿತಿ ನೀಡಲಾಗಿದೆ. ಇದರಿಂದ ಬಂದರು ಅಭಿವೃದ್ಧಿ ಕಾರ್ಯಗಳು ಹಾಗೂ ವ್ಯಾಪಾರ ಚಟುವಟಿಕೆಗಳು ಮುಂದುವರಿಯಲಿವೆ. ಎಂದರು”

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಇರಾನ್‌ನ ಪರಮಾಣು ಯೋಜನೆಗೆ ಅಡ್ಡಹಾಕುವ ಉದ್ದೇಶದಿಂದ ಕಳೆದ ತಿಂಗಳಲ್ಲೇ ಚಾಬಹಾರ್ ಬಂದರು ಮೇಲಿನ ನಿರ್ಬಂಧಗಳನ್ನು ವಿಧಿಸಿತ್ತು. ಈ ಕ್ರಮವು ಭಾರತದ ಅಭಿವೃದ್ಧಿ ಯೋಜನೆಗಳಿಗೆ ತಾತ್ಕಾಲಿಕ ಅಡೆತಡೆ ಉಂಟುಮಾಡಿತ್ತು. ಇದೇ ವೇಳೆ, ರಷ್ಯಾದಿಂದ ತೈಲ ಆಮದು ಕುರಿತಂತೆ ಜೈಸ್ವಾಲ್ ಸ್ಪಷ್ಟಪಡಿಸಿದ್ದು ಹೀಗೆ: “ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುವ ನಮ್ಮ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಮಾರುಕಟ್ಟೆಯ ಬೆಲೆ ಹಾಗೂ ದೇಶದ ಇಂಧನ ಅಗತ್ಯತೆ ಆಧಾರದಲ್ಲಿ ಭಾರತ ಖರೀದಿ ನಿರ್ಧಾರ ಕೈಗೊಳ್ಳುತ್ತದೆ. ಕಡಿಮೆ ದರದಲ್ಲಿ ಲಭ್ಯವಿದ್ದರೆ ಅದನ್ನು ಖರೀದಿಸಲು ಮುಂದಾಗುತ್ತೇವೆ.” ಎಂದು ಹೇಳಿದ್ದರು.

error: Content is protected !!