ಹೊಸದಿಗಂತ ತುಮಕೂರು:
ನಗರದ ಹೆಮ್ಮೆಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ನಾಮಕರಣ ಮಾಡಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸೋಮವಾರ ಸಂಜೆ ಕ್ರೀಡಾಂಗಣದ ಮುಂಭಾಗ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು, ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಗಾಂಧೀಜಿಯವರ ಹೆಸರಿದ್ದ ಕ್ರೀಡಾಂಗಣಕ್ಕೆ ಸಚಿವರ ಹೆಸರಿಟ್ಟಿರುವುದು ಮಹಾತ್ಮ ಗಾಂಧಿಗೆ ಮಾಡುವ ಅಪಮಾನ. ತಕ್ಷಣವೇ ಸಚಿವರ ಹೆಸರನ್ನು ತೆರವುಗೊಳಿಸಿ ‘ಮಹಾತ್ಮ ಗಾಂಧಿ’ ಹೆಸರನ್ನೇ ಉಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು ಮಾತನಾಡಿ, “ಈ ಕ್ರೀಡಾಂಗಣವನ್ನು ಪ್ರಧಾನಿ ಮೋದಿ ಅವರ ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರ ಶ್ರಮದಿಂದ ಇದು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದೆ. ಆದರೆ, ಸಚಿವ ಪರಮೇಶ್ವರ್ ಅವರು ಕ್ರೆಡಿಟ್ ಪಡೆಯಲು ಮುಂದಾಗಿದ್ದಾರೆ” ಎಂದು ಟೀಕಿಸಿದರು.
ಕ್ರೀಡಾಂಗಣಕ್ಕೆ ರಾಜಕಾರಣಿಗಳ ಹೆಸರಿಡುವ ಬದಲು, ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳ ಹೆಸರಿಡುವುದು ಸೂಕ್ತ ಎಂದು ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಗೌಡ, ನಗರ ಅಧ್ಯಕ್ಷ ಟಿ.ಕೆ. ಧನುಷ್ ಸೇರಿದಂತೆ ಹಲವು ಮುಖಂಡರು ಮತ್ತು ಪಾಲಿಕೆ ಮಾಜಿ ಸದಸ್ಯರು ಭಾಗವಹಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.



