ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಜಾಗತಿಕ ಗಮನ ಸೆಳೆದಿದ್ದಾರೆ. ದಾವೋಸ್‌ನಲ್ಲಿ ನಡೆದ ಜಾಗತಿಕ ಆರ್ಥಿಕ ವೇದಿಕೆ ಸಭೆಯಲ್ಲಿ ಮಾತನಾಡಿದ ಅವರು, ಕೆಲ ಸಂದರ್ಭಗಳಲ್ಲಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುವುದು ಅನಿವಾರ್ಯ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣರಾದರು. ಇದೇ ವೇಳೆ, ತಮಗೆ ಬಂದ ಪ್ರತಿಕ್ರಿಯೆಗಳು ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಕಾರಾತ್ಮಕವಾಗಿದ್ದವು ಎಂದು ಟ್ರಂಪ್ ಆಶ್ಚರ್ಯ ವ್ಯಕ್ತಪಡಿಸಿದರು.
ತಮ್ಮ ಆಡಳಿತ ಶೈಲಿಯನ್ನು ವಿವರಿಸಿದ ಟ್ರಂಪ್, ತಮ್ಮ ನಿರ್ಧಾರಗಳು ಯಾವುದೇ ರಾಜಕೀಯ ಸಿದ್ಧಾಂತದಿಂದಲ್ಲ, ಬದಲಾಗಿ ಸಾಮಾನ್ಯ ಜ್ಞಾನದಿಂದ ರೂಪುಗೊಂಡಿವೆ ಎಂದು ಸ್ಪಷ್ಟಪಡಿಸಿದರು. ಇದು ಸಂಪ್ರದಾಯವಾದವೂ ಅಲ್ಲ, ಉದಾರವಾದವೂ ಅಲ್ಲ, ಬಹುಪಾಲು ಸಾಮಾನ್ಯ ಬುದ್ಧಿಯ ಮೇಲೇ ಆಧಾರಿತವಾಗಿದೆ ಎಂದು ಹೇಳಿದರು. ತಮ್ಮ ಮಾತುಗಳು ಕೆಲವೊಮ್ಮೆ ಗೊಂದಲ ಉಂಟುಮಾಡಬಹುದು ಎಂದು ಒಪ್ಪಿಕೊಂಡರೂ, ತಮ್ಮ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.
ಇದೇ ಭಾಷಣದಲ್ಲಿ ಗ್ರೀನ್‌ಲ್ಯಾಂಡ್ ವಿಷಯಕ್ಕೂ ಅವರು ಸ್ಪಷ್ಟನೆ ನೀಡಿದರು. ಇತ್ತೀಚೆಗೆ ನಾಟೊ ಮಿತ್ರ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದ್ದ ತಮ್ಮ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಸೇನಾ ಕ್ರಮ ಅಥವಾ ಆರ್ಥಿಕ ಒತ್ತಡ ಹೇರುವ ಯೋಚನೆ ಇಲ್ಲ ಎಂದು ಹೇಳಿದರು. ಡೆನ್ಮಾರ್ಕ್, ಗ್ರೀನ್‌ಲ್ಯಾಂಡ್ ಹಾಗೂ ಅಮೆರಿಕ ನಡುವೆ ದೀರ್ಘಕಾಲಿಕ ಒಪ್ಪಂದ ಸಾಧ್ಯತೆ ಇದೆ ಎಂದು ಅವರು ಸೂಚಿಸಿದರು.


