ಹೊಸದಿಗಂತ ವರದಿ ಮಡಿಕೇರಿ:
ಕುಡಿದ ಮತ್ತಿನಲ್ಲಿ ಮಗನೇ ತನ್ನ ತಂದೆಯನ್ನು ಹತ್ಯೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಸಮೀಪದ ಹೊಸ್ಕೇರಿಯಲ್ಲಿ ನಡೆದಿದೆ.
ಹೊಸ್ಕೇರಿ ಗ್ರಾಮದ ದೇವಯ್ಯ ಎಂಬವರಿಗೆ ಸೇರಿದ ಲೈನ್ ಮನೆಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಬೂರೋ ಎಂಬವರೇ ಅವರ ಪುತ್ರ ಪ್ರಶಾಂತ್ ಎಂಬಾತನಿಂದ ಹತ್ಯೆಗೀಡಾಗಿರುವುದಾಗಿ ಹೇಳಲಾಗಿದ್ದು, ಘಟನೆ ನಡೆದ ಮೂರು ದಿನದ ಬಳಿಕ ವಿಷಯ ಬೆಳಕಿಗೆ ಬಂದಿದೆ.
ಲೈನ್ ಮನೆಯಲ್ಲಿ ವಾಸವಿದ್ದ ಬೂರೋನೊಂದಿಗೆ ಜ.11ರಂದು ಕುಡಿದ ಮತ್ತಿನಲ್ಲಿ ಜಗಳವಾಡಿದ ಆತನ ಪುತ್ರ ಪ್ರಶಾಂತ್ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದನೆನ್ನಲಾಗಿದೆ. ಈ ವಿಷಯ ತಿಳಿದ ತೋಟದ ಮಾಲಕ ದೇವಯ್ಯ ಹಾಗೂ ಅವರ ಪತ್ನಿ ಭಾರತಿ ಘಟನೆ ನಡೆದ ಬಳಿಕ ಕೊಲೆ ವಿಚಾರವನ್ನು ಯಾರಿಗೂ ತಿಳಿಸದೆ, ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಭಾಗವಾಗಿ ಮೃತದೇಹವನ್ನು ಮಡಿಕೇರಿಯ ಹಿಂದೂ ರುದ್ರಭೂಮಿಯೊಂದಕ್ಕೆ ಸಾಗಿಸಿ ಸುಟ್ಟು ಹಾಕಿರುವುದಾಗಿ ಹೇಳಲಾಗಿದೆ.
ಈ ಬಗ್ಗೆ ದೊರೆತ ಮಾಹಿತಿ ಅನ್ವಯ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಶಾಂತ್ ಹಾಗೂ ಕೊಲೆಯ ವಿಚಾರವನ್ನು ಯಾರಿಗೂ ತಿಳಿಸದೆ ಶವವನ್ನು ಸಾಗಿಸಿ ಸುಟ್ಟುಹಾಕಿದ ದೇವಯ್ಯ ಹಾಗೂ ಭಾರತಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಶವ ಸಾಗಾಟಕ್ಕೆ ಸಹಕಾರ ನೀಡಿದ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


