ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿದ ಅಮಲಿನಲ್ಲಿ ತಾಯಿಯನ್ನ ಬೆದರಿಸಲು ಹೋದ ಯುವಕನೋರ್ವ, ಆಕಸ್ಮಿಕವಾಗಿ ನೇಣಿನ ಕುಣಿಕೆಗೆ ಸಿಲುಕಿ ಸಾವನ್ನಪ್ಪಿರುವ ಧಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್ ನಗರದಲ್ಲಿ ಸಂಭವಿಸಿದೆ. ಮೃತನನ್ನು 28 ವರ್ಷದ ವಿಜಯಕುಮಾರ್ ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಿಜಯಕುಮಾರ್ ಸ್ವಭಾವತಃ ತಮಾಷೆ ಮಾಡುವ ಗುಣದವನಾಗಿದ್ದ. ಮಂಗಳವಾರ ಸಂಜೆ ಮದ್ಯ ಸೇವಿಸಿ ಮನೆಗೆ ಬಂದಿದ್ದ ಈತ, ತಾಯಿಯ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ತಾಯಿ ಹಣ ನೀಡಲು ನಿರಾಕರಿಸಿದಾಗ, “ನಾನು ಸಾಯುತ್ತೇನೆ” ಎಂದು ಹೆದರಿಸಲು ಮುಂದಾಗಿದ್ದಾನೆ. ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಆತ್ಮಹತ್ಯೆಯ ನಾಟಕವಾಡಿ ತಾಯಿಯನ್ನು ಹೆದರಿಸುತ್ತಿದ್ದ ವಿಜಯ್, ಈ ಬಾರಿಯೂ ಅದೇ ರೀತಿ ತಮಾಷೆ ಮಾಡಲು ಹೋಗಿ ಕಿಟಕಿಯ ಬಳಿ ನೇಣಿನ ಕುಣಿಕೆ ಹಾಕಿಕೊಂಡಿದ್ದಾನೆ. ಆದರೆ, ದುರಂತವೆಂದರೆ ಕುಡಿದ ಅಮಲಿನಲ್ಲಿ ಆಯತಪ್ಪಿ ಕುಣಿಕೆ ಬಿಗಿದುಕೊಂಡಿದ್ದರಿಂದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.
ಮಗನಿಗೆ ಮದುವೆ ಮಾಡಿ ಸಂಸಾರ ಹೂಡಬೇಕೆಂದು ಕನಸು ಕಂಡಿದ್ದ ತಾಯಿಗೆ ಈಗ ಮಗನ ಸಾವಿನ ಸುದ್ದಿ ಆಘಾತ ತಂದಿದೆ. “ಸಾವಿನ ವಿಷಯದಲ್ಲಿ ತಮಾಷೆ ಬೇಡ” ಎಂದು ತಾಯಿ ಪದೇ ಪದೇ ಬುದ್ಧಿ ಹೇಳುತ್ತಿದ್ದರೂ ಕೇಳದ ಮಗ, ಇಂದು ಅದೇ ಹಠಕ್ಕೆ ಬಲಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

