ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಹಲವು ವೈಶಿಷ್ಟ್ಯಪೂರ್ಣ ಸ್ಪರ್ಧಾ ವಿಶೇಷತೆಗಳು ಗಮನ ಸೆಳೆಯುತ್ತಿವೆ. ಇಂತಹುದರಲ್ಲಿ ಕೇರಳದ ಮುನ್ನಾರ್ ಪಂಚಾಯತ್‌ನ ನಲ್ಲತ್ತಾನ್ನಿ ವಾರ್ಡ್‌ನಲ್ಲಿ ೩೪ ವರ್ಷ ಪ್ರಾಯದ ಸೋನಿಯಾ ಗಾಂಧಿ ಬಿಜೆಪಿಯಿಂದ ಸ್ಪರ್ಧಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಹೌದು, ಸೋನಿಯಾ ಗಾಂಧಿ ಕಟ್ಟಾ ಕಾಂಗ್ರೆಸಿಗ ದಿ.ದುರೈರಾಜ್ ಅವರ ಪುತ್ರಿ.ಅವರು ಸೋನಿಯಾ ಗಾಂಧಿ ಅವರ ಹೆಸರನ್ನು ತನ್ನ ಪುತ್ರಿಗೆ ಇಡುವ ಮೂಲಕ ತನ್ನ ಕಾಂಗ್ರೆಸ್ ಪ್ರೇಮವನ್ನು ಮೆರೆದಿದ್ದರು. ಆದರೆ ವಿವಾಹದ ವಯಸ್ಸಿಗೆ ಬಂದ ಅವರ ಪುತ್ರಿ ಸೋನಿಯಾ ಗಾಂಧಿ ಅವರನ್ನು ಬಿಜೆಪಿಯ ಪಂಚಾಯತ್ ಕಾರ್ಯದರ್ಶಿ ಸುಭಾಷ್ ಅವರಿಗೆ ಮದುವೆ ಮಾಡಿಕೊಡಲಾಗಿದೆ. ವಿವಾಹದ ಬಳಿಕ ಅವರು ತಂದೆಯ ರಾಜಕೀಯ ನಿಲುವನ್ನು ಅನುಸರಿಸದೆ ಪತಿಯ ರಾಜಕೀಯ ನಿಲುವನ್ನು ಅನುಸರಿಸಿದ್ದಾರೆ.ಇದರಂತೆ,ಸಹಜವಾಗಿಯೇ ಅವರೀಗ ಬಿಜೆಪಿ ಅಭಿಮಾನಿ ಹಾಗೂ ಕಾರ್ಯಕರ್ತೆಯಾಗಿದ್ದಾರೆ.
ಇದೀಗ ಅವರು ಈ ವಾರ್ಡಿನಲ್ಲಿ ಕಾಂಗ್ರೆಸಿನ ಮಂಜುಳಾ ರಮೇಶ್ ಎಂಬವರ ಎದುರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.ಈ ಸ್ಪರ್ಧೆ ಈಗ ಕೇರಳದಲ್ಲಿ ವ್ಯಾಪಕ ಗಮನ ಸೆಳೆದಿದೆ.ಬಿಜೆಪಿಯಿಂದ ಸೋನಿಯಾ ಗಾಂಧಿ ಸ್ಪರ್ಧೆ ಎಂದು ವೈರಲ್ ಆಗಿದೆ. ಈ ಪ್ರಚಾರ ಎಷ್ಟು ಪ್ರಭಾವಿಯಾಗಿದೆ ಎಂದರೆ, ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ಬಿಜೆಪಿ ಅಭ್ಯರ್ಥಿಯ ಪೂರ್ಣ ಹೆಸರು ಉಲ್ಲೇಖಿಸದೆ ಎಚ್ಚರಿಕೆ ವಹಿಸುತ್ತಾರೆ.
ಇಲ್ಲೀಗ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ ಬಿಜೆಪಿಯ ಗೆಲುವಿಗೆ ಅಹರ್ನಿಶಿ ಶ್ರಮಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರೂ ಕಾಂಗ್ರೆಸನ್ನು ಸೋಲಿಸಿ ಈ ವಾರ್ಡನ್ನು ಬಿಜೆಪಿ ತೆಕ್ಕೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕೆಂದು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಬಿಜೆಪಿ -ಕಾಂಗ್ರೆಸ್ ಪೈಪೋಟಿಯ ಲಾಭವನ್ನು ಪಡೆಯಬಹುದೇ ಎಂಬ ಪ್ರಯತ್ನದಲ್ಲಿ ಎಲ್‌ಡಿಎಫ್‌ನ ವಲಾರ್‌ಮತಿ ಇದ್ದಾರೆ.ಅಂತು ಈ ಪ್ರಸಿದ್ಧ ಹಿಲ್‌ಸ್ಟೇಷನ್ ವಾರ್ಡ್‌ನಲ್ಲಿನ ಸ್ಪರ್ಧೆ ಈ ಬಾರಿ ಭಾರೀ ರಾಜಕೀಯ ಕುತೂಹಲ ಸೃಷ್ಟಿಸಿರುವುದಂತೂ ನಿಜ.

