Monday, September 8, 2025

72 ರನ್​ಗಳಿಗೆ ಆಲೌಟ್ ಆದ ದಕ್ಷಿಣ ಆಫ್ರಿಕಾ: ಅತಿದೊಡ್ಡ ಅಂತರದ ಗೆಲುವು ದಾಖಲಿಸಿದ ಇಂಗ್ಲೆಂಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ ದಾಖಲೆಯ ಸೋಲು ಕಂಡಿದೆ. ಸೌತಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 414 ರನ್ ಬೃಹತ್ ಮೊತ್ತ ದಾಖಲಿಸಿದರೆ, ಪ್ರತಿಯಾಗಿ ದಕ್ಷಿಣ ಆಫ್ರಿಕಾ ಕೇವಲ 72 ರನ್‌ಗಳಿಗೆ ಆಲೌಟ್ ಆಗಿ 342 ರನ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿತು. ಇದು ಏಕದಿನ ಹಾಗೂ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಂತರದ ಗೆಲುವಾಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ ಶತಕ, ಜೋ ರೂಟ್ ಶತಕ ಹಾಗೂ ಜೋಸ್ ಬಟ್ಲರ್ ವೇಗದ ಅರ್ಧಶತಕದ ನೆರವಿನಿಂದ 414 ರನ್‌ಗಳನ್ನು ಕಲೆಹಾಕಿತು. ದಕ್ಷಿಣ ಆಫ್ರಿಕಾ ಬೌಲರ್‌ಗಳಲ್ಲಿ ಕೇಶವ್ ಮಹಾರಾಜ್ ಮತ್ತು ಕಾರ್ಬಿನ್ ಬಾಷ್ ತಲಾ ಎರಡು ವಿಕೆಟ್ ಪಡೆದರು. ಆದರೆ ನಂತರದ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಸಂಪೂರ್ಣ ಕುಸಿದುಬಿದ್ದಿತು. ಪವರ್‌ಪ್ಲೇ ಅವಧಿಯಲ್ಲಿ ಕೇವಲ 24 ರನ್‌ಗಳಿಗೇ ಆರು ವಿಕೆಟ್ ಕಳೆದುಕೊಂಡಿತು. ಜೋಫ್ರಾ ಆರ್ಚರ್ 4 ವಿಕೆಟ್ ಪಡೆದು ಆಫ್ರಿಕಾದ ಟಾಪ್ ಬ್ಯಾಟರ್‌ಗಳನ್ನು ಮಣಿಸಿದರು.

ಮಹಾರಾಜ್ (17) ಮತ್ತು ಬಾಷ್ (20) ಮಾತ್ರ ಸ್ವಲ್ಪ ಪ್ರತಿರೋಧ ತೋರಿದರೆ, ಉಳಿದ ಆಟಗಾರರು ಎರಡಂಕಿಗೂ ತಲುಪಲಿಲ್ಲ. ಕೊನೆಗೆ 72 ರನ್‌ಗಳಿಗೇ ಆಫ್ರಿಕಾ ಆಲೌಟ್ ಆಗಿ ಕ್ರಿಕೆಟ್ ಇತಿಹಾಸದ ಅತ್ಯಂತ ಅವಮಾನಕರ ದಾಖಲೆ ಬರೆಯಿತು.

ಇದನ್ನೂ ಓದಿ