ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ಸ್ಪಿನ್ ಮೋಡಿಯಿಂದ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ರಾವಲ್ಪಿಂಡಿಯ ಪಿಚ್‌ನಲ್ಲಿ ಆತಿಥೇಯ ಪಾಕಿಸ್ತಾನದ ಬ್ಯಾಟರ್‌ಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ ಮಹಾರಾಜ್, ಕೇವಲ 102 ರನ್ ನೀಡಿ 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರ ಫಲವಾಗಿ ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 333 ರನ್‌ಗಳಿಗೆ ಆಲೌಟ್ ಆಗಿದೆ.
ದಾಖಲೆಗಳ ಸುರಿಮಳೆ:
42.4 ಓವರ್‌ಗಳನ್ನು ಎಸೆದ ಕೇಶವ್ ಮಹಾರಾಜ್, ತಮ್ಮ ನಿಖರ ದಾಳಿಯ ಮೂಲಕ ಹಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪಿದ್ದಾರೆ:
ಪಾಕಿಸ್ತಾನ್ ಪಿಚ್‌ನಲ್ಲಿ 7 ವಿಕೆಟ್: ಪಾಕಿಸ್ತಾನ್ ಪಿಚ್‌ನಲ್ಲಿ ಏಳು ವಿಕೆಟ್‌ಗಳನ್ನು ಉರುಳಿಸಿದ ದಕ್ಷಿಣ ಆಫ್ರಿಕಾದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಏಷ್ಯಾದಲ್ಲಿ 7 ವಿಕೆಟ್ ಸಾಧನೆ: ಏಷ್ಯಾ ಪಿಚ್‌ನಲ್ಲಿ ಎರಡು ಬಾರಿ 7 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ದಕ್ಷಿಣ ಆಫ್ರಿಕಾದ ಬೌಲರ್ ಎಂಬ ಹೊಸ ದಾಖಲೆಯನ್ನು ಬರೆದಿದ್ದಾರೆ. ಇದಕ್ಕೂ ಮುನ್ನ ಅವರು ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ 129 ರನ್‌ಗಳಿಗೆ 9 ವಿಕೆಟ್ ಪಡೆದಿದ್ದರು.
ಪಾಕ್ ಪಿಚ್‌ನಲ್ಲಿ ಅತೀ ಕಡಿಮೆ ರನ್ ನೀಡಿ 7 ವಿಕೆಟ್: ಪಾಕಿಸ್ತಾನ್ ನೆಲದಲ್ಲಿ ಅತ್ಯಂತ ಕಡಿಮೆ ರನ್ ನೀಡಿ 7 ವಿಕೆಟ್ ಕಬಳಿಸಿದ ದಕ್ಷಿಣ ಆಫ್ರಿಕಾದ ಬೌಲರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆಯು ಪೌಲ್ ಆ್ಯಡಮ್ಸ್ (2003 ರಲ್ಲಿ ಲಾಹೋರ್‌ನಲ್ಲಿ ಪಾಕ್ ವಿರುದ್ಧ 128 ರನ್‌ಗಳಿಗೆ 7 ವಿಕೆಟ್) ಹೆಸರಿನಲ್ಲಿತ್ತು. ಕೇಶವ್ ಮಹಾರಾಜ್ ಈಗ 102 ರನ್‌ಗೆ 7 ವಿಕೆಟ್ ಉರುಳಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ನಾಯಕ ಶಾನ್ ಮಸೂದ್ ಅವರ ನಿರ್ಧಾರಕ್ಕೆ ಕೇಶವ್ ಮಹಾರಾಜ್ ತಮ್ಮ ಸ್ಪಿನ್ ಪ್ರದರ್ಶನದ ಮೂಲಕ ಸರಿಯಾದ ಉತ್ತರ ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಇತರ ಬೌಲರ್‌ಗಳ ಎದುರು ಪಾಕ್ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ಮಹಾರಾಜ್ ದಾಳಿಗೆ ಮಾತ್ರ ಶರಣಾಗಬೇಕಾಯಿತು.