ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಗೌರವಾನ್ವಿತ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗಿದೆ. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ ನಡೆದ ಗಾಂಭೀರ್ಯದ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಅವರು ಈ ಪ್ರತಿಷ್ಠಿತ ಗೌರವ ಪದವಿಯನ್ನು ಪ್ರದಾನ ಮಾಡಿದರು.
‘ಗೌರವದ ಜೊತೆಗೆ ಜವಾಬ್ದಾರಿ ಹೆಚ್ಚಾಗಿದೆ’: ಯು.ಟಿ.ಖಾದರ್
ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. “ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದಿಂದ ಈ ಗೌರವ ಡಾಕ್ಟರೇಟ್ ಸ್ವೀಕರಿಸಿರುವುದು ಹೆಮ್ಮೆ ಮತ್ತು ಸಂತೋಷದ ವಿಷಯ. ಈ ಡಾಕ್ಟರೇಟ್ ಪದವಿಯು ಗೌರವವನ್ನು ಹೆಚ್ಚಿಸುವುದರ ಜೊತೆಗೆ ಜವಾಬ್ದಾರಿಯನ್ನು ಕೂಡ ಹೆಚ್ಚಿಸಿದೆ. ಭವಿಷ್ಯದಲ್ಲೂ ವಿಶ್ವವಿದ್ಯಾಲಯದ ಮೌಲ್ಯ ಮತ್ತು ವಿಶ್ವಾಸವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ” ಎಂದು ಭರವಸೆ ನೀಡಿದರು.
ಖಾದರ್ ಅವರು ತಮ್ಮ ಹಳೆಯ ಕನಸನ್ನು ಸ್ಮರಿಸಿದರು. “ಕಾಲೇಜು ದಿನಗಳಲ್ಲಿ ಡಾಕ್ಟರ್ ಆಗುವ ಕನಸು ಕಂಡಿದ್ದೆ. ಆದರೆ ವಿಜ್ಞಾನ ವಿಷಯದಲ್ಲಿ ಕಡಿಮೆ ಅಂಕಗಳು ಬಂದ ಕಾರಣ ಆ ಕನಸು ಕೈಗೂಡಲಿಲ್ಲ, ಆಗ ಕಾನೂನು ವಿಷಯವನ್ನು ಆಯ್ದುಕೊಂಡೆ. ಆದರೆ ಮುಂದೆ ಆರೋಗ್ಯ ಸಚಿವನಾಗಿ ಕೆಲಸ ಮಾಡುವ ಅವಕಾಶ ಲಭಿಸಿದ್ದು ಸಂತಸ ತಂದಿತು. ಇಂದು ವೈದ್ಯನಾಗದಿದ್ದರೂ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಡಾಕ್ಟರೇಟ್ ಲಭಿಸಿರುವುದು ಅತ್ಯಂತ ಖುಷಿಯ ವಿಷಯವಾಗಿದೆ. ಈ ಪ್ರೀತಿ ಮತ್ತು ಸಹಕಾರವನ್ನು ಸದಾ ನೆನಪಿಟ್ಟುಕೊಳ್ಳುತ್ತೇನೆ,” ಎಂದು ಸಂತಸ ವ್ಯಕ್ತಪಡಿಸಿದರು.
ಭಾರತೀಯರೆಲ್ಲರೂ ಒಗ್ಗಟ್ಟಾಗಿ ಸಾಗೋಣ
ಸಮಾಜದ ಕುರಿತು ಮಾತನಾಡಿದ ಅವರು, ಸಮಾಜವು ಸಾಮರಸ್ಯದಿಂದ ಸಾಗಬೇಕು. ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪ್ರೀತಿ ಮತ್ತು ವಿಶ್ವಾಸದಿಂದ ಬದುಕಬೇಕು. ಭಾರತೀಯರೆಲ್ಲರೂ ಒಗ್ಗಟ್ಟಾಗಿ ಸಾಗೋಣ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಜಯಕರ ಎಸ್.ಎಂ., ಕುಲಸಚಿವರಾದ ಕೆ.ಟಿ.ಶಾಂತಲಾ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಸಿ.ಎಸ್.ಕರಿಗಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

