January20, 2026
Tuesday, January 20, 2026
spot_img

ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಹತ್ತಿಕ್ಕಲು ಸ್ಪೆಷಲ್‌ ಆಕ್ಷನ್‌ ಫೋರ್ಸ್‌ ರಚನೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಹತ್ಯೆ, ಹಿಂಸಾಚಾರ, ಪ್ರಚೋದನಕಾರಿ ಭಾಷಣ ಹಾಗೂ ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳನ್ನು ಹತ್ತಿಕ್ಕಲು ಸ್ಪೆಷಲ್‌ ಆಕ್ಷನ್‌ ಫೋರ್ಸ್‌ ರಚನೆ ಮಾಡಿದ್ದೇವೆಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರು ರಸ್ತೆಯ ಸಿಎಆರ್‌ ಕೇಂದ್ರದಲ್ಲಿ ನಡೆದ ಪೊಲೀಸ್‌ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ‌ ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿ, ರಾಜ್ಯದ ಘನತೆ, ಅಭಿವೃದ್ಧಿ ಮತ್ತು ಪ್ರಗತಿಗೆ ಕಂಟಕವಾಗಿದ್ದ ಸಂವಿಧಾನ ವಿರೋಧಿ ಅನೈತಿಕ ಪೊಲೀಸ್‌ಗಿರಿಗೆ ರಾಜ್ಯದಲ್ಲಿ ಕಡಿವಾಣ ಬಿದ್ದಿದೆ.‌ ಇದರ ಶ್ರೇಯಸ್ಸು ಪೊಲೀಸ್ ಇಲಾಖೆಗೆ ಸಲ್ಲಬೇಕು. ಪೊಲೀಸ್ ಇಲಾಖೆ ಶಾಂತಿ-ಸುವ್ಯವಸ್ಥೆ ಕಾಪಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಬಿದ್ದಿರುವುದು ಉತ್ತಮ‌ ಕೆಲಸ. ಈ ಎಲ್ಲಾ ಸಾಧನೆಗಳ ಶ್ರೇಯ ಪೊಲೀಸ್ ಇಲಾಖೆಗೆ ಸಲ್ಲಬೇಕು. ರಾಜ್ಯದಲ್ಲಿ ಪರಿಶಿಷ್ಠ ಜಾತಿ ಹಾಗೂ ವರ್ಗದವರ ಮೇಲಿನ ದೌರ್ಜನ್ಯ ತಡೆಗೆ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಕಾರ್ಯೋನ್ಮುಖಗೊಳಿಸಿದ್ದೇವೆ. ಇವು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಸಾಂವಿಧಾನಿಕ ಹಕ್ಕು ಮತ್ತು ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಬೇಕು ಎಂದರು.

ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಮೇಲೆ ರಾಜ್ಯದ ಅಭಿವೃದ್ಧಿ ಕಾಣುತ್ತೆ. ರಾಜ್ಯಕ್ಕೆ ಬಂಡವಾಳ ಹರಿದುಬರುವಲ್ಲೂ ಪೊಲೀಸರ ಪಾತ್ರವಿದೆ. ಪ್ರಾಣತ್ಯಾಗದ ಜೊತೆಗೆ ಹಲವರು ಗಾಯಗೊಂಡಿರುತ್ತಾರೆ. ಅವರೆಲ್ಲರ ಜೊತೆಗೆ ಸರ್ಕಾರ ಇರುತ್ತೆ. ಕೋಮು ಹತ್ಯೆ, ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ ಹೆಚ್ಚಾಗಿ ಉಡುಪಿ, ದಕ್ಷಿಣ ಕನ್ನಡದಲ್ಲಿ ಆಗುತ್ತೆ. ಹೀಗಾಗಿ ಇಂತಹ ಪ್ರಕರಣಗಳನ್ನ ಹತ್ತಿಕ್ಕಲು ಸ್ಪೆಷಲ್‌ ಆಕ್ಷನ್‌ ಫೋರ್ಸ್‌ ಶುರು ಮಾಡಿದ್ದೇವೆ ಎಂದು ತಿಳಿಸಿದರು.

ಜನರ ರಕ್ಷಣೆಗೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ತಂದಿದ್ದೇವೆ. ಬೇರೆ ರಾಜ್ಯ, ದೇಶಗಳಿಂದ ಬಂದ ಜನರಿಗೆ ಸುರಕ್ಷತೆ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಿದ್ದೆ. ಮೊದಲು ಕಾನೂನು ಸುವ್ಯವಸ್ಥೆ ಹಾಳಾಗಿತ್ತು. ಆದ್ರೆ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಸರಿದಾರಿಯಲ್ಲಿದೆ. ಇದಕ್ಕೆ ಶ್ರಮಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇನೆಂದರು.

ನಿವೃತ್ತ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಸೇವಾ ನಿಧಿಗೆ 10 ಕೋಟಿ ರೂ. ನೀಡುವುದಾಗಿ ಸಿಎಂ ಘೋಷಿಸಿದರು. ಅನುಕಂಪದ ಆಧಾರದಲ್ಲಿ 116 ಕುಟುಂಬದವರಿಗೆ ಕೆಲಸ ಒದಗಿಸಲಾಗಿದೆ. ಅಲ್ಲದೇ ಕೋಮುಹತ್ಯೆ, ಹಿಂಸಾಚಾರ, ಪ್ರಚೋದನಕಾರಿ ಭಾಷಣ ನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳನ್ನ ತಡೆಯಲು ರಾಜ್ಯದಲ್ಲಿ ಸ್ಪೆಷಲ್‌ ಆಕ್ಷನ್‌ ಫೋರ್ಸ್‌ ರಚನೆ ಮಾಡಿದ್ದೇವೆ. ಮಾದಕ ದ್ರವ್ಯಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ನಂದಿಬೆಟ್ಟದಲ್ಲಿ 2 ಭಾರತೀಯ ಮೀಸಲು ಪಡೆ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ಹೊಸದಾಗಿ ಎರಡು ಬಾಂಬ್ ಸ್ಕ್ಯಾಡ್ ಮಾಡಲಾಗಿದೆ. ನಾಗರಿಕರಿಗಾಗಿ ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಜಾರಿ ಮಾಡಿದ್ದೇವೆ. ಎಸ್ಸಿ-ಎಸ್ಟಿ ಜನರ ರಕ್ಷಣೆಗೆ ಡಿಸಿಆರ್-ಎ ಠಾಣೆ ತಂದಿದ್ದೇವೆ ಎಂದರು.

Must Read