Friday, November 7, 2025

ಮಹಿಳಾ ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಟಾಟಾ ಕಡೆಯಿಂದ ಸ್ಪೆಷಲ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನವೆಂಬರ್ 2ರಂದು ನಡೆದ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ 52 ರನ್‌ಗಳಿಂದ ಸೌತ್ ಆಫ್ರಿಕಾವನ್ನು ಮಣಿಸಿ ಐತಿಹಾಸಿಕ ವಿಜಯ ಸಾಧಿಸಿತು. ಇದೇ ಮೊದಲ ಬಾರಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಇದೀಗ ಟಾಟಾ ಮೋಟಾರ್ಸ್ ಕಂಪೆನಿಯು ವಿಶೇಷ ಉಡುಗೊರೆ ಘೋಷಿಸಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ ಅವರು ಪ್ರಕಟಣೆ ಹೊರಡಿಸಿ, ಭಾರತದ ಮಹಿಳಾ ತಂಡದ ಶ್ರದ್ಧೆ, ಶ್ರಮ ಮತ್ತು ಆತ್ಮವಿಶ್ವಾಸಕ್ಕೆ ಗೌರವ ಸೂಚನೆ ರೂಪದಲ್ಲಿ ಪ್ರತಿಯೊಬ್ಬ ಆಟಗಾರ್ತಿಗೆ ಹೊಸ ಟಾಟಾ ಸಿಯೆರಾ ಎಸ್‌ಯುವಿ ಕಾರು ಉಡುಗೊರೆಯಾಗಿ ನೀಡಲಾಗುವುದಾಗಿ ತಿಳಿಸಿದ್ದಾರೆ. ಟೀಮ್ ಇಂಡಿಯಾದ ಕೋಚ್ ಹಾಗೂ ಸಹಾಯಕ ಸಿಬ್ಬಂದಿಗಳಿಗೂ ಈ ಉಡುಗೊರೆ ಸಿಗಲಿದೆ ಎಂದು ತಿಳಿಸಿದ್ದಾರೆ.

“ಟಾಟಾ ಸಿಯೆರಾ ಭಾರತೀಯ ವಾಹನ ಕ್ಷೇತ್ರದ ಪರಂಪರೆ ಮತ್ತು ಶಕ್ತಿಯ ಸಂಕೇತ. ಟೀಮ್ ಇಂಡಿಯಾ ಕೂಡ ಅದೇ ಧೈರ್ಯ ಮತ್ತು ದೃಢನಿಶ್ಚಯದ ಪ್ರತೀಕ. ಹೀಗಾಗಿ ಈ ಐಕಾನಿಕ್ ಕಾರು ಅವರನ್ನು ಸನ್ಮಾನಿಸಲು ಸೂಕ್ತ ಉಡುಗೊರೆ,” ಎಂದು ತಿಳಿಸಿದ್ದಾರೆ.

error: Content is protected !!