ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕೈಗೊಳ್ಳಲು ಕೇಂದ್ರ ಚುನಾವಣಾ ಆಯೋಗ ಸಜ್ಜಾಗಿದೆ. ಈ ನಿಟ್ಟಿನಲ್ಲಿ SIR ಕೈಗೊಳ್ಳುವ ಮೊದಲ 10-15 ರಾಜ್ಯಗಳ ವೇಳಾಪಟ್ಟಿಯನ್ನು ಇಂದು ಪ್ರಕಟಿಸಲಿದೆ.
ಇಂದು ಸಂಜೆ 4.45ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ಹಂತಹಂತವಾಗಿ ಎಸ್‌ಐಆರ್ ನಡೆಸುವ ರಾಜ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ಪರಿಷ್ಕರಣೆಯು 2026 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಸೇರಿದಂತೆ 10 ರಿಂದ 15 ರಾಜ್ಯಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ.
ಮುಂದಿನ ವಿಧಾನಸಭಾ ಚುನಾವಣೆಗಳು ಸಂಭವಿಸುತ್ತಿರುವ ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 10-15 ರಾಜ್ಯಗಳಲ್ಲಿ ಸರ್ ನಡೆಯಲಿದೆ. ಬಹುತೇಕ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ SIR ನಡೆದಿತ್ತು.
2026ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರ ಚುನಾವಣೆಗೂ ಮುನ್ನವೇ ಅಂದ್ರೆ ನವೆಂಬರ್ 1ರಿಂದಲೇ ಈ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ.
ಬಂಗಾಳದಲ್ಲಿ ಪರಿಷ್ಕರಣೆ ವೇಳೆ ಬೂತ್-ಮಟ್ಟದ ಅಧಿಕಾರಿಗಳಿಗೆ ಸಹಾಯ ಮಾಡಲು ಚುನಾವಣಾ ಆಯೋಗ ಸ್ವಯಂ ಸೇವಕರನ್ನ ನೇಮಕ ಮಾಡಲಿದೆ. ಸ್ವಯಂಸೇವಕರು, ಪ್ರಾಥಮಿಕವಾಗಿ ಸರ್ಕಾರಿ ನೌಕರರು, 1,200ಕ್ಕೂ ಹೆಚ್ಚು ಮತದಾರರನ್ನ ಹೊಂದಿರುವ ಮತದಾನ ಕೇಂದ್ರಗಳಲ್ಲಿ ಸಮೀಕ್ಷೆಗೆ ಸಹಕರಿಸುತ್ತಾರೆ. ಅಲ್ಲದೇ ಪ್ರತಿ ಬೂತ್‌ಗೆ ಮತದಾರರ ಸಂಖ್ಯೆಯ ಮೇಲೆ ಮಿತಿ ಹೇರಿರುವುದರಿಂದ, ಪಶ್ಚಿಮ ಬಂಗಾಳದಲ್ಲಿ ಸುಮಾರು 14,000 ಮತಗಟ್ಟೆಗಳು ಹೆಚ್ಚಾಗಬಹುದು, ಒಟ್ಟು 80,000 ರಿಂದ ಸರಿಸುಮಾರು 94,000ಕ್ಕೆ ಮತಗಟ್ಟೆಗಳು ತಲುಪುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

