ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಋತ್ಯ ರೈಲ್ವೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಳೆದ ಬಾರಿಯಿಂದ ಶೇ. 23ರಷ್ಟು ಆದಾಯ ಹೆಚ್ಚಿಸಿ ಕೊಂಡಿದೆ.
ವಿಶೇಷ ರೈಲುಗಳ ಓಡಾಟ ಇದಕ್ಕೆ ಪೂರಕ ಎಂದು ಅಂದಾಜಿಸಲಾಗಿದೆ. ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ 2025ರ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆ 355 ವಿಶೇಷ ರೈಲುಗಳನ್ನು ಓಡಿಸಿದೆ. ಇದರಿಂದ ಒಟ್ಟು 171.47 ಕೋಟಿ ಆದಾಯ ಗಳಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 351 ವಿಶೇಷ ರೈಲುಗಳ ಕಾರ್ಯಾಚರಣೆಯಿಂದ ರೂ. 138.83 ಕೋಟಿ ಆದಾಯ ಬಂದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ರೂ. 32.64 ಕೋಟಿ ಹೆಚ್ಚುವರಿ ಆದಾಯ ಬಂದಿದೆ.
19.55 ಲಕ್ಷ ಪ್ರಯಾಣಿಕರು
ಈ ಅವಧಿಯಲ್ಲಿ ಬರೋಬ್ಬರಿ 19.55 ಲಕ್ಷ ಪ್ರಯಾಣಿಕರು ವಿಶೇಷ ರೈಲು ಸೇವೆಯ ಲಾಭ ಪಡೆದಿದ್ದಾರೆ. ನಿಗದಿತ ಬರ್ತ್ ಸಾಮರ್ಥ್ಯ 17.15 ಲಕ್ಷಕ್ಕೆ ಹೋಲಿಸಿದರೆ, ಶೇ.11೪ರಷ್ಟು ಬುಕಿಂಗ್ ದರ ದಾಖಲಾಗಿರುವುದು ಮತ್ತು ರೂ. 161.26 ಕೋಟಿ ಗಳಿಕೆಯ ಸಾಮರ್ಥ್ಯಕ್ಕೆ ವಿರುದ್ಧವಾಗಿ ಶೇ. 106.34ರಷ್ಟು ಗಳಿಕೆಯ ದಕ್ಷತೆ ಸಾಧಿಸಿರುವುದು ಅತ್ಯುತ್ತಮ ಕಾರ್ಯಾಚರಣೆಯ ದಕ್ಷತೆಯನ್ನು ಸೂಚಿಸುತ್ತದೆ.
ಸೇವೆಗಳ ಬಲವರ್ಧನೆ:
ವಿಶೇಷ ರೈಲುಗಳ ಜೊತೆಗೆ, ನೈರುತ್ಯ ರೈಲ್ವೆ ತನ್ನ ನಿಯಮಿತ ರೈಲು ಸೇವೆಗಳ ಬಲವರ್ಧನೆಗೂ ಒತ್ತು ನೀಡಿದೆ. ಏಪ್ರಿಲ್ ನಿಂದ ಅಕ್ಟೋಬರ್ 2025ರ ನಡುವೆ 561 ಹೆಚ್ಚುವರಿ ಬೋಗಿಗಳನ್ನು ಜೋಡಿಸಿ 35,564 ಹೆಚ್ಚುವರಿ ಬರ್ತ್ ಗಳನ್ನು ಒದಗಿಸಲಾಗಿದೆ. ಇದರಿಂದ 24,530 ಹೆಚ್ಚುವರಿ ಪ್ರಯಾಣಿಕರ ಓಡಾಟಕ್ಕೆ ಅನುಕೂಲವಾಗಿದೆ. ಇದರಿಂದ 2.09 ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಜೂನ್ ಮತ್ತು ಅಕ್ಟೋಬರ್ 2025 ರ ಪೀಕ್ ಟ್ರಾವೆಲ್ ಮತ್ತು ಹಬ್ಬದ ಋತುಗಳಲ್ಲಿ ಅತ್ಯಧಿಕ ಹೆಚ್ಚುವರಿ ಆದಾಯ ಗಳಿಕೆ ದಾಖಲಾಗಿದೆ.

