ಆರೋಗ್ಯಕರ ಜೀವನಕ್ಕಾಗಿ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆ ಮಾಡಿದರೆ ದೊಡ್ಡ ಪರಿಣಾಮ ತರುತ್ತದೆ. ಅದರಲ್ಲೂ ಹೆಸರು ಕಾಳುಗಳು ಪ್ರಮುಖ ಸ್ಥಾನ ಹೊಂದಿವೆ. ಪ್ರೋಟೀನ್ ಅಂಶಗಳು ಹೆಚ್ಚಾಗಿ ಇರುವ ಹೆಸರು ಕಾಳುಗಳನ್ನು ನೆನೆಸಿ ಮೊಳಕೆ ಬರಿಸಿ ತಿಂದರೆ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭಕರ. ಬೆಳಗಿನ ಉಪಹಾರದಲ್ಲಿ ಇವುಗಳನ್ನು ಸೇರಿಸಿಕೊಂಡರೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುವುದಲ್ಲದೆ, ಶಕ್ತಿವರ್ಧನೆಗೂ ಸಹಾಯಕವಾಗುತ್ತದೆ.

ಮೊಳಕೆಯಾದ ಹೆಸರು ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುತ್ತದೆ. ಇದರಿಂದ ಸ್ನಾಯುಗಳಿಗೆ ಬಲ ದೊರೆತು ಜಿಮ್ ಮಾಡುವವರು ಅಥವಾ ಕಸರತ್ತು ಮಾಡುವವರಿಗೆ ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ. ಜೊತೆಗೆ ವಿಟಮಿನ್ ಬಿ, ಕಬ್ಬಿಣ, ಮ್ಯಾಗ್ನೇಶಿಯಂ ಅಂಶಗಳು ದೇಹದ ಶಕ್ತಿಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿ. ಆಮ್ಲಜನಕದ ಸರಬರಾಜನ್ನು ಸುಧಾರಿಸುವುದರಿಂದ ದೇಹ ಚುರುಕುತನ ಹೊಂದುತ್ತದೆ.
ನೆನೆಯಿಟ್ಟ ಕಾಳುಗಳಲ್ಲಿ ಹೆಚ್ಚಿನ ಫೈಬರ್ ಅಂಶಗಳಿದ್ದು, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಧಾನವಾಗಿ ಬಿಡುಗಡೆ ಮಾಡುವ ಗುಣವು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ.

ಇದೇ ರೀತಿ ಹೆಸರುಕಾಳುಗಳಲ್ಲಿ ಇರುವ ಪೊಟ್ಯಾಸಿಯಂ ಮತ್ತು ಮ್ಯಾಗ್ನೇಶಿಯಂ ಅಂಶಗಳು ರಕ್ತದೊತ್ತಡವನ್ನು ಸಮತೋಲನಗೊಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಫೈಬರ್ ಅಂಶವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಅಪಾಯಗಳಿಂದ ದೂರ ಇಡುತ್ತದೆ.
ಒಟ್ಟಿನಲ್ಲಿ, ಹೆಸರು ಕಾಳಿನ ಮೊಳಕೆ ದೇಹಕ್ಕೆ ಶಕ್ತಿ, ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ನೀಡುವ ನೈಸರ್ಗಿಕ ಆಹಾರವಾಗಿದೆ.
