January16, 2026
Friday, January 16, 2026
spot_img

ಐಪಿಎಲ್ 2026 ಹರಾಜಿಗೆ ಸಜ್ಜಾದ SRH: ಬೌಲಿಂಗ್ ವಿಭಾಗ ಬಲಪಡಿಸಲು ಹೊಸ ತಂತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜು ಸಮೀಪಿಸುತ್ತಿರುವಂತೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂದಿನ ಋತುವಿಗೆ ತಯಾರಾಗುತ್ತಿದೆ. 2025ರ ಸೀಸನ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿಸಲು ವಿಫಲವಾದ ನಂತರ, ತಂಡ ನಿರ್ವಹಣೆ ಈಗ ಪ್ರಮುಖ ಬದಲಾವಣೆಗಳಿಗೆ ಮುಂದಾಗಿದೆ. ವಿಶೇಷವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರು ಕೆಲವು ಪ್ರಮುಖ ಬೌಲರ್‌ಗಳನ್ನು ಉಳಿಸಿಕೊಂಡು ಹೊಸ ಕೋರ್ ತಂಡವನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ.

ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಘಟಕದ ಹೃದಯವಾಗಿದ್ದು, 2025ರ ಐಪಿಎಲ್‌ನಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ ಅವರು ನಾಯಕತ್ವದ ಜೊತೆಗೆ ಅನುಭವದ ಶಕ್ತಿ ನೀಡುತ್ತಿದ್ದಾರೆ. ಅವರ ಜೊತೆಗೆ ಎಡಗೈ ವೇಗಿ ಜಯದೇವ್ ಉನಾದ್ಕಟ್ 7.34 ಎಕಾನಮಿಯಲ್ಲಿ 11 ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ರನ್‌ಗತಿಗೆ ಕಡಿವಾಣ ಹಾಕುವ ಹಾಗೂ ನಿಧಾನಗತಿಯ ಚೆಂಡುಗಳ ವೈವಿಧ್ಯತೆಯಲ್ಲಿ ಪರಿಣಿತರಾದ ಉನಾದ್ಕಟ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ಪಂದ್ಯ ತಿರುಗಿಸುವ ಸಾಮರ್ಥ್ಯ ಹೊಂದಿರುವ ಹರ್ಷಲ್ ಪಟೇಲ್ ಕೂಡ ತಂಡದ ವಿಶ್ವಾಸಾರ್ಹ ಆಯ್ಕೆಯಾಗಿದ್ದಾರೆ. 16 ವಿಕೆಟ್‌ಗಳನ್ನು ಪಡೆದಿದ್ದರೂ ಅವರ ಎಕಾನಮಿ ಸ್ವಲ್ಪ ಹೆಚ್ಚಾಗಿದ್ದರೂ ವಿಕೆಟ್‌ಗಳ ಪಡೆಯುವ ಹಂಬಲದಿಂದ ಅವರು ಪಂದ್ಯವನ್ನು ತಮ್ಮ ವಶಕ್ಕೆ ತರುವ ಶಕ್ತಿ ಹೊಂದಿದ್ದಾರೆ. ಇದೇ ವೇಳೆ ಲೆಗ್ ಸ್ಪಿನ್ನರ್ ಜೀಶನ್ ಅನ್ಸಾರಿ ಮತ್ತು ಯುವ ವೇಗಿ ಇಶಾನ್ ಮಾಲಿಂಗರನ್ನು ಭವಿಷ್ಯದ ತಾರೆಯರಾಗಿ ಬೆಳೆಸುವ ಯೋಜನೆಯಿದೆ. ಇಶಾನ್ ತಮ್ಮ ಚೊಚ್ಚಲ ಋತುವಿನಲ್ಲಿ 13 ವಿಕೆಟ್‌ಗಳೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದರು.

ಮೂಲಗಳ ಪ್ರಕಾರ, ತಂಡ ನಿರ್ವಹಣೆ ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ ಮತ್ತು ಮೊಹಮ್ಮದ್ ಶಮಿಯವರನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿ ಇದೆ. ಈ ಕ್ರಮದಿಂದ ಸುಮಾರು 45 ಕೋಟಿಗೂ ಹೆಚ್ಚು ಮೊತ್ತ ಉಳಿಯುವ ಸಾಧ್ಯತೆ ಇದೆ. ಕ್ಲಾಸೆನ್ ಅವರನ್ನು ಕಡಿಮೆ ಮೊತ್ತದಲ್ಲಿ ಮರುಖರೀದಿಸುವ ಯೋಜನೆಯೂ ಇದೆ ಎಂದು ತಿಳಿದುಬಂದಿದೆ. ನಾಯಕತ್ವದ ಸ್ಥಿರತೆ ಮತ್ತು ಬೌಲಿಂಗ್ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಕಾವ್ಯಾ ಮಾರನ್ ನೇತೃತ್ವದ ಎಸ್‌ಆರ್‌ಹೆಚ್ ಮುಂದಿನ ಹರಾಜಿನಲ್ಲಿ ಬಲಿಷ್ಠ ಮತ್ತು ಸಮತೋಲನ ಹೊಂದಿದ ತಂಡವನ್ನು ಕಟ್ಟಲು ಸಜ್ಜಾಗಿದೆ.

Must Read

error: Content is protected !!