March 31, 2026
Tuesday, March 31, 2026
spot_img

ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ‘ಸುಪ್ರೀಂ’ ಜಡ್ಜ್: ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್‌ಎಂ ದಿಲೀಪ್‌ ನವಾಜ್‌ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮ್ಮ ವಿರುದ್ಧದ ಎಲ್ಲ ಮಾನಹಾನಿ ಸುದ್ದಿ,ಲೇಖನ ಮತ್ತು ಯುಆರ್‌ಎಲ್‌ಗಳನ್ನು ತೆಗೆದುಹಾಕಲು ನಿರ್ದೇಶಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ, ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ, ಗೂಗಲ್ ಇಂಕ್, ಕೊಲಂಬೋ ಟೆಲಿಗ್ರಾಫ್ ಹಾಗೂ ಲಂಕಾ ಇ-ನ್ಯೂಸ್‌ಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೆ, ಕೊಲಂಬೊ ಟೆಲಿಗ್ರಾಫ್‌ ಮತ್ತು ಲಂಕಾ ಈನ್ಯೂಸ್‌ಗೆ ಇ-ಮೇಲ್‌ ಮೂಲಕ ನೊಟೀಸ್ ಕಳುಹಿಸಿಕೊಡಬೇಕು ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ಮಾ.16ಕ್ಕೆ ವಿಚಾರಣೆ ಮುಂದೂಡಿದೆ.

ಎಎಚ್‌ಎಂಡಿ ನವಾಜ್ ಅವರು ಶ್ರೀಲಂಕಾದ ಕೋರ್ಟ್‌ ಆಫ್‌ ಅಪೀಲ್‌ನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಕೊಲಂಬೊ ಟೆಲಿಗ್ರಾಫ್‌ ಮತ್ತು ಲಂಕಾಈನ್ಯೂಸ್‌ ಸುದ್ದಿ ತಾಣಗಳು 2015 ಮತ್ತು 2020ರಲ್ಲಿ ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಿರುವುದು ಗೂಗಲ್‌ನಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಆರೋಪಿಸಲಾದ ಕೃತ್ಯಗಳಲ್ಲಿ ನಾವು ಭಾಗಿಯಾಗಿಲ್ಲ. ಆ ಸುದ್ದಿಗಳಿಂದ ತಮಗೆ ಮಾನಹಾನಿಯಾಗಿದೆ. ಆನ್‌ಲೈನ್‌ನಲ್ಲಿರುವ ಮಾನಹಾನಿ ವಿಚಾರಗಳನ್ನು ತೆಗೆದು ಹಾಕುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಯುಆರ್‌ಎಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು 2023ರಲ್ಲಿ ಗೂಗಲ್‌ಗೆ ಲೀಗಲ್‌ ನೊಟೀಸ್ ಕಳುಹಿಸಲಾಗಿತ್ತು. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆಬಾರದೇ ಇರುವುದರಿಂದ ಮತ್ತು ಗೂಗಲ್‌ನ ಭಾರತದ ಪ್ರಧಾನ ಕಚೇರಿಯು ಬೆಂಗಳೂರಿನಲ್ಲಿ ಇರುವುದರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ .

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !