Sunday, January 11, 2026

ಬೆಳಗಾವಿಯಲ್ಲಿ SSLC ಪೂರ್ವಸಿದ್ಧತಾ ಪರೀಕ್ಷೆ ಯಡವಟ್ಟು: ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಲೀಕ್?

ಹೊಸದಿಗಂತ ಬೆಳಗಾವಿ:

ರಾಜ್ಯಮಟ್ಟದ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ–1ರ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಶನಿವಾರ ನಡೆಯಬೇಕಿದ್ದ ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯು ಪರೀಕ್ಷೆ ಆರಂಭಕ್ಕೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪರೀಕ್ಷೆ ಆರಂಭವಾಗುವ ಮುನ್ನವೇ “Delta SSLC” ಎಂಬ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಪ್ರಶ್ನೆಪತ್ರಿಕೆಯ ಫೋಟೋಗಳು ವೈರಲ್ ಆಗಿವೆ ಎನ್ನಲಾಗಿದೆ. ಗಮನಾರ್ಹವೆಂದರೆ, ಕಳೆದ ವರ್ಷವೂ ಸಹ ಇದೇ ಖಾತೆಯು ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಪರೀಕ್ಷಾ ಮಂಡಳಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮತ್ತೊಂದೆಡೆ, ಪರೀಕ್ಷೆಯ ಸಮೀಪಿಸುತ್ತಿದ್ದಂತೆ ಕೆಲವು ಕಿಡಿಗೇಡಿಗಳು ವಿದ್ಯಾರ್ಥಿಗಳ ಹಣ ಹಾಗೂ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೇವಲ 100 ರೂಪಾಯಿಗೆ ನಕಲಿ ಪ್ರಶ್ನೆಪತ್ರಿಕೆಗಳನ್ನು ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಜಾಲವೊಂದು ಸಕ್ರಿಯವಾಗಿದೆ. ಇಂತಹ ವಂಚಕರ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಪರೀಕ್ಷಾ ಮಂಡಳಿಯಿಂದ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಆದರೆ, ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಕೆಳಗಿನ ಮನವಿ ಮಾಡಿದೆ:

ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳಿಗೆ ಕಿವಿಗೊಡಬೇಡಿ.

ಅಧಿಕೃತ ವೆಬ್‌ಸೈಟ್ ಹಾಗೂ ಶಾಲಾ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಿ.

ಯಾವುದೇ ಅಪರಿಚಿತ ಲಿಂಕ್‌ಗಳಿಗೆ ಹಣ ಪಾವತಿಸಿ ಮೋಸಹೋಗಬೇಡಿ.

ಈ ಘಟನೆಯಿಂದಾಗಿ ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿದ್ದು, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!