January17, 2026
Saturday, January 17, 2026
spot_img

SSLC ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಶಿಕ್ಷಕರು–ವಿದ್ಯಾರ್ಥಿಗಳ ಕೈವಾಡ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಗಂಭೀರ ಮಾಹಿತಿಗಳು ಒಂದೊಂದಾಗಿ ಹೊರಬರುತ್ತಿವೆ. ಈ ಅಕ್ರಮದಲ್ಲಿ ಆರು ಮಂದಿ ಶಿಕ್ಷಕರು ಹಾಗೂ ಒಂಬತ್ತು ವಿದ್ಯಾರ್ಥಿಗಳು ನೇರವಾಗಿ ಭಾಗಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತನಿಖೆಯ ಪ್ರಕಾರ, ಕೆಲವು ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು ಕೇವಲ 30 ರೂಪಾಯಿಗೆ ಇತರರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವರು 50, 100 ಮತ್ತು 150 ರೂಪಾಯಿ ದರದಲ್ಲಿ ಪ್ರಶ್ನೆಪತ್ರಿಕೆ ಹಂಚಿಕೆ ಮಾಡಿಕೊಂಡಿದ್ದು, ಒಟ್ಟು ಸುಮಾರು 1,500 ರೂಪಾಯಿ ಹಣ ಸಂಗ್ರಹವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಪೊಲೀಸರು ಸಂಬಂಧಪಟ್ಟ ಶಿಕ್ಷಕರ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಗಾಗಿ ನೇರವಾಗಿ ಹಣ ಪಡೆದಿರುವ ಸ್ಪಷ್ಟ ಪುರಾವೆ ಇನ್ನೂ ದೊರಕಿಲ್ಲ.

ಬಂಧನಕ್ಕೊಳಗಾದ ಶಿಕ್ಷಕರು ತಮ್ಮ ಅಧಿಕೃತ ಲಾಗಿನ್ ಐಡಿಗಳನ್ನು ಬಳಸಿಕೊಂಡು ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿ, ಅದನ್ನು ವಿದ್ಯಾರ್ಥಿಗಳಿಗೆ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣ ಗಂಭೀರವಾಗುತ್ತಿದ್ದಂತೆ, ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅಳಿಸಿರುವುದೂ ಕಂಡುಬಂದಿದೆ.

ಆದರೆ, ವಿದ್ಯಾರ್ಥಿಗಳ ಇನ್‌ಬಾಕ್ಸ್ ಸಂದೇಶಗಳ ಆಧಾರದಲ್ಲಿ ಪೊಲೀಸರು ಸಂಪರ್ಕದಲ್ಲಿದ್ದವರ ಪಟ್ಟಿ ಸಿದ್ಧಪಡಿಸಿದ್ದು, ಅದರ ಆಧಾರದಲ್ಲಿ ಐಪಿ ಅಡ್ರೆಸ್ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ ಈ ಗಂಭೀರ ಲೋಪವು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Must Read

error: Content is protected !!