ಒಡಿಶಾದ ಕಟಕ್‌ನ ಬಾಲ ಯಾತ್ರಾ ಮೈದಾನದಲ್ಲಿ ಐತಿಹಾಸಿಕ ಬಾಲ ಯಾತ್ರೆಯ ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಲಕ್ಷಾಂತರ ಅಭಿಮಾನಿಗಳು ಸೇರಿದ್ದು. ಜನಸಂದಣಿ ಏಕಾಏಕಿ ಹೆಚ್ಚಾದಾಗ ನಿಯಂತ್ರಣಕ್ಕೆ ಬಾರದೆ ಗಂಭೀರ ನೂಕು ನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಯಿತು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನವೇ ಜನಸಮೂಹ ತಾಳ್ಮೆ ಕಳೆದುಕೊಂಡು ಬ್ಯಾರಿಕೇಡ್‌ಗಳನ್ನು ಮುರಿಯುವ ಮಟ್ಟಕ್ಕೆತಲುಪಿದ್ದು, ಆ ಸ್ಥಳದಲ್ಲಿ ಕ್ಷಣಾರ್ಧದಲ್ಲಿ ಗೊಂದಲದ ವಾತಾವರಣ ಮೂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪ್ರೇಕ್ಷಕರ ನಡುವೆ ಉಂಟಾದ ನೂಕು ನುಗ್ಗಲು ಮತ್ತು ಗಲಾಟೆಯಿಂದ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. ಅಸ್ವಸ್ಥರಾದವರನ್ನು ಸ್ಥಳೀಯ ಪೊಲೀಸರು ತಕ್ಷಣವೇ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದು ನಂತರ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ಯಾವುದೇ ಗಂಭೀರ ಗಾಯಗಳ ಮಾಹಿತಿ ದೊರೆತಿಲ್ಲ. ಒತ್ತಡ ಹೆಚ್ಚಾದ ಕಾರಣ ಪೊಲೀಸರು ಗಲಭೆಕೋರ ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರಕ್ಕೂ ಮುಂದಾಗಬೇಕಾಯಿತು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ವತಃ ಪರಿಸ್ಥಿತಿಯನ್ನು ಅವಲೋಕಿಸಲು ಭೇಟಿ ನೀಡಿದರು ಎಂದು ವರದಿಯಾಗಿದೆ.
ನವೆಂಬರ್ 5 ರಂದು ಆರಂಭಗೊಂಡಿದ್ದ ಬಾಲ ಯಾತ್ರೆ ನವೆಂಬರ್ 13 ರಂದು ಅಂತ್ಯಗೊಂಡಿದ್ದು, ಅದರ ಆಚರಣೆಯ ಅಂತಿಮ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಲಾವಿದರ ಪ್ರದರ್ಶನಗಳನ್ನು ಯೋಜಿಸಲಾಗಿತ್ತು. ರಾಜ್ಯದ ಸಮುದ್ರಸಂಪರ್ಕದ ಇತಿಹಾಸವನ್ನು ಸ್ಮರಿಸುವ ಬೋಯಿಟಾ ಬಂದಾನ ಆಚರಣೆಯೊಂದಿಗೆ ಪ್ರಸಿದ್ಧವಾಗಿರುವ ಈ ಜಾತ್ರೆ ಸಾಮಾನ್ಯವಾಗಿ ದೊಡ್ಡ ಜನಸಂದಣಿಗೆ ಸಾಕ್ಷಿಯಾಗುತ್ತದೆ. ಆದರೆ ಈ ಬಾರಿ ಜನರ ಅನಿಯಂತ್ರಿತ ನೂಕು ನುಗ್ಗಲು ಆಯೋಜಕರಿಗೂ ಅಧಿಕಾರಿಗಳಿಗೂ ದೊಡ್ಡ ಸವಾಲಾಗಿಬಿಟ್ಟಿತು.

