ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ನೇತೃತ್ವದ ರ‍್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ದುರ್ಘಟನೆಯ ನಂತರ ನಟ ವಿಜಯ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ತಮಿಳುನಾಡು ಸ್ಟೂಡೆಂಟ್ಸ್ ಯೂನಿಯನ್ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದೆ.
ಘಟನೆಯ ಬೆನ್ನಲ್ಲೇ ಕರೂರಿನಲ್ಲಿ ವಿಜಯ್ ವಿರುದ್ಧ ಪೋಸ್ಟರ್‌ಗಳು ಅಂಟಿಸಲಾಗಿದ್ದು, ಅವರು ಜನರ ಸಾವಿಗೆ ನೇರ ಹೊಣೆಗಾರರು ಎಂಬ ಆರೋಪ ಹೊರಿಸಲಾಗಿದೆ. ಇದೇ ಸಂದರ್ಭದಲ್ಲಿ ನೀಲಂಕರೈ ನಿವಾಸದಿಂದ ಪಟ್ಟಿನಪಕ್ಕಂ ಮನೆಯನ್ನು ಪ್ರವೇಶಿಸಿದ್ದ ವಿಜಯ್ ಅವರ ಭದ್ರತೆಯನ್ನು ಹೆಚ್ಚಿಸಲು ಮೂವರು ಪೊಲೀಸರು ಮನೆಗೆ ಭೇಟಿ ನೀಡಿದ್ದರು. ಇದೀಗ ಒಟ್ಟು 10 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ವಿಜಯ್ ಅವರ ವಿರುದ್ಧ ತೀವ್ರ ಪ್ರತಿಭಟನೆ ನಡೆದಿದ್ದರೂ, ಪೊಲೀಸರು ಬಂಧನಕ್ಕಾಗಿ ಅಲ್ಲ, ಭದ್ರತೆಯ ದೃಷ್ಟಿಯಿಂದ ಮನೆಗೆ ತೆರಳಿದ್ದರೆಂದು ತಿಳಿದುಬಂದಿದೆ. ಪ್ರಸ್ತುತ ವಿಜಯ್ ತಮ್ಮ ಪಟ್ಟಿನಪಕ್ಕಂ ನಿವಾಸದಲ್ಲಿದ್ದು, ಯಾರನ್ನೂ ಭೇಟಿಯಾಗಲು ಸಮಯ ನೀಡಿಲ್ಲ ಎನ್ನಲಾಗಿದೆ.
ಇತ್ತ, ಅರುಣಾ ಜಗದೀಶನ್ ನೇತೃತ್ವದ ತನಿಖಾ ಆಯೋಗವು ದುರಂತದ ಬಗ್ಗೆ ತನಿಖೆ ಪ್ರಾರಂಭಿಸಿದ್ದು, ಸಾವನ್ನಪ್ಪಿದ 41 ಮಂದಿಯಲ್ಲಿ 18 ಮಹಿಳೆಯರು, 13 ಪುರುಷರು, 5 ಬಾಲಕರು ಹಾಗೂ 5 ಬಾಲಕಿಯರು ಸೇರಿದ್ದಾರೆ. ಮೃತರಲ್ಲಿ ಹೆಚ್ಚಿನವರು ಕರೂರ್ ಜಿಲ್ಲೆಯವರಾಗಿದ್ದು, ಕೆಲವರು ಸಮೀಪದ ಜಿಲ್ಲೆಗಳವರಾಗಿದ್ದಾರೆ.