ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ನಿವಾಸದ ಮುಂದೆ ಇತ್ತೀಚೆಗೆ ನಡೆದ ಗಲಾಟೆಯು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ರೆಡ್ಡಿ ಅವರೇ ಈ ಘಟನೆಗೆ ನೇರ ಕಾರಣ ಎಂದು ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, “ಶಾಸಕ ಭರತ್ ರೆಡ್ಡಿ ತನ್ನ ಗನ್ ಮ್ಯಾನ್ ಮೂಲಕ ಗುಂಡು ಹಾರಿಸಿದ್ದಾರೆ. ‘ಬಳ್ಳಾರಿಯನ್ನು ಸುಟ್ಟು ಹಾಕುತ್ತೇನೆ’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದರೂ ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಪ್ರಕರಣದ ಮೂಲ ಸೂತ್ರಧಾರಿ ಸತೀಶ್ ರೆಡ್ಡಿ ಅವರಿಗೆ ಬೆಂಗಳೂರಿನಲ್ಲಿ ರಾಜ್ಯಾತಿಥ್ಯ ನೀಡಿ ಬಚ್ಚಿಡಲಾಗಿದೆ. ಸ್ವಪಕ್ಷದ ಶಾಸಕನನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ” ಎಂದು ಕಿಡಿಕಾರಿದರು.
ಸಾಮಾನ್ಯ ಜನರು ಅಥವಾ ಬಿಜೆಪಿ ಕಾರ್ಯಕರ್ತರು ಸಣ್ಣ ತಪ್ಪು ಮಾಡಿದರೂ ತಕ್ಷಣ ಬಂಧಿಸುವ ಪೊಲೀಸರು, ಶಾಸಕರ ವಿಷಯದಲ್ಲಿ ಮೃದು ಧೋರಣೆ ತಳೆಯುತ್ತಿದ್ದಾರೆ ಎಂದು ಅವರು ದೂರಿದರು. “ರೀಲ್ಸ್ ಮಾಡಿದವರನ್ನು ಹಿಡಿಯುವ ಪೊಲೀಸರಿಗೆ, ಗಲಾಟೆ ಮಾಡಿದ ಶಾಸಕರು ಕಾಣಿಸುತ್ತಿಲ್ಲವೇ? ಗೃಹ ಸಚಿವರ ವಿರುದ್ಧ ಪ್ರತಿಭಟಿಸಿದರೆ ಅಟ್ರಾಸಿಟಿ ಕೇಸ್ ಹಾಕುತ್ತಿದ್ದಾರೆ. ಆದರೆ, ಗಲಾಟೆ ಮಾಡಿದ ಶಾಸಕರ ಹಿಂಬಾಲಕರನ್ನು ಹಾಗೂ ಗನ್ ಮ್ಯಾನ್ ಗಳನ್ನು ಯಾಕೆ ಬಂಧಿಸಿಲ್ಲ?” ಎಂದು ಪ್ರಶ್ನಿಸಿದರು.
ತಹಸೀಲ್ದಾರ್ ಮೂಲಕ ಈಗಾಗಲೇ 33 ಮಂದಿ ಬಿಜೆಪಿ ಕಾರ್ಯಕರ್ತರಿಗೆ 107 ನೋಟಿಸ್ ನೀಡಲಾಗಿದೆ. ಅಮಾಯಕರನ್ನು ವಿಚಾರಣೆಗೆ ಒಳಪಡಿಸಿ ಲಿಸ್ಟ್ ಮಾಡುತ್ತಿರುವ ಸರ್ಕಾರ, ನೈಜ ಆರೋಪಿಗಳನ್ನು ರಕ್ಷಿಸುತ್ತಿದೆ. ಕೂಡಲೇ ಭರತ್ ರೆಡ್ಡಿ ಮತ್ತು ಅವರ ಬೆಂಬಲಿಗರನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಶ್ರೀರಾಮುಲು ಎಚ್ಚರಿಸಿದ್ದಾರೆ.

