Thursday, December 18, 2025

ರಾಜ್ಯಾದ್ಯಂತ ಭ್ರಷ್ಟರ ಆಸ್ತಿ ಬೇಟೆ: ಅಧಿಕಾರಿ ಮನೆಗೆ ಲೋಕಾಯುಕ್ತ ‘ಶಾಕ್’ ಟ್ರೀಟ್‌ಮೆಂಟ್!

ಹೊಸದಿಗಂತ ಬೆಳಗಾವಿ:

ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಹಲವೆಡೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಿಢೀರ್ ದಾಳಿ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದೆ.

ಬೆಂಗಳೂರು, ಧಾರವಾಡ, ಶಿವಮೊಗ್ಗ, ಮಂಡ್ಯ ಮತ್ತು ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ತಂಡಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ.

ಧಾರವಾಡದಲ್ಲಿ ನಡೆದ ದಾಳಿ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿದೆ. ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜಶೇಖರ್ ಅವರ ಧಾರವಾಡದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳಿಂದ ಅನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲೋಕಾಯುಕ್ತ ಸಿಬ್ಬಂದಿಯನ್ನು ನೋಡಿ ಗಾಬರಿಗೊಂಡ ರಾಜಶೇಖರ್ ಅವರು, ತಮ್ಮ ಬಳಿ ಇದ್ದ ಸುಮಾರು ₹50,000 ನಗದನ್ನು ಕಮೋಡ್‌ಗೆ ಸುರಿದು ಫ್ಲಶ್ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸುಮಾರು ಅರ್ಧಗಂಟೆ ಕಾಲ ಲೋಕಾಯುಕ್ತ ಪೊಲೀಸರನ್ನು ಮನೆಯ ಹೊರಗೇ ಕಾಯಿಸಿ ಬಳಿಕ ಬಾಗಿಲು ತೆರೆದಿದ್ದಾರೆ.

ರಾಜಶೇಖರ್ ಅವರಿಗೆ ಸಂಬಂಧಿಸಿದ ಒಟ್ಟು ಮೂರು ಕಡೆಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದರಲ್ಲಿ ರಾಣಿ ಚೆನ್ನಮ್ಮ ನಗರದಲ್ಲಿರುವ ಅವರ ಖಾಸಗಿ ಕಚೇರಿ ಮತ್ತು ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಕೂಡ ಸೇರಿವೆ. ಈ ಶೋಧ ಕಾರ್ಯದಲ್ಲಿ ಮಹತ್ವದ ಆಸ್ತಿ ಮತ್ತು ಆದಾಯಕ್ಕೆ ಮೀರಿದ ಸಂಪಾದನೆಯ ದಾಖಲೆಗಳು ಸಿಗುವ ಸಾಧ್ಯತೆ ಇದೆ.

error: Content is protected !!