ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಸಂಭವಿಸಿದ್ದು, ಕೆಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮದ್ದೂರು ಸೇರಿದಂತೆ ಕೆಲವೇ ಪ್ರದೇಶಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದರೂ, ಎಲ್ಲಾ ಸ್ಥಳಗಳನ್ನು ಪೊಲೀಸ್ ಭದ್ರತೆ ನಿಯೋಜನೆ ಮೂಲಕ ನಿಯಂತ್ರಣದಲ್ಲಿಟ್ಟಿದ್ದಾರೆ ಎಂದರು.
ಪದೇಪದೇ ಈ ತರಹದ ಘಟನೆಗಳು ಸಂಭವಿಸುತ್ತಿದ್ದರಿಂದ ಜನರು ಸಹ ಜಾಗರೂಕರಾಗಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಣ್ಣ ಘಟನೆಗಳಿದ್ದರೂ ಕೂಡ, ತಕ್ಷಣ ಕ್ರಮ ಕೈಗೊಳ್ಳಲಾಗಿದೆ” ಎಂದರು. ಬಿಜೆಪಿ ಪಕ್ಷದವರು ನೀಡಿದ ಆರೋಪಗಳ ಕುರಿತು, “ಅವರೂ ಅದೇ ರೀತಿಯ ಕೆಲಸ ಮಾಡುತ್ತಿದ್ದಾರೆ” ಎಂದು ಗೃಹ ಸಚಿವರು ಪ್ರತಿಕ್ರಿಯಿಸಿದರು.
ಧರ್ಮಸ್ಥಳ ಪ್ರಕರಣ ಸಂಬಂಧ, ಗೃಹ ಸಚಿವರು ಎಸ್‌ಐಟಿ ತನಿಖೆ ನಡೆಯುತ್ತಿರುವುದನ್ನು ತಿಳಿಸಿದ್ದು ತನಿಖೆ ಮುಗಿಯುವವರೆಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾರು ಪಾತ್ರಗಾರರು ಎಂಬುದು ತನಿಖೆಯಲ್ಲಿ ಸ್ಪಷ್ಟವಾಗುತ್ತದೆ. ಸೋನಿಯಾ ಗಾಂಧಿಗೆ ಕೆಲವು ಪತ್ರ ಬಂದಿರಬಹುದು, ಆದರೆ ತನಿಖೆಯ ಮೇಲೆ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಅವರು ಹೇಳಿದರು.