Monday, September 8, 2025

ಸಿಎಂ ಹೊಗಳಿದ ಶಾಂತಿದೂತರಿಂದ ಗಣೇಶನ ಮೇಲೆ ಕಲ್ಲು ತೂರಾಟ: ಸಿಟಿ ರವಿ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದ ಘಟನೆ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಿಟಿ ರವಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ಸಿಟಿ ರವಿ ಅವರು ತಮ್ಮ ಪೋಸ್ಟ್‌ನಲ್ಲಿ, “ಮುಖ್ಯಮಂತ್ರಿಗಳು ಎರಡು ದಿನಗಳ ಹಿಂದೆ ಶಾಂತಿದೂತರೆಂದು ಹೊಗಳಿದವರು ಈಗ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾಗರದಲ್ಲಿ ಗಣಪತಿಯ ವಿಗ್ರಹಕ್ಕೆ ಅವಮಾನ ಮಾಡಿದ್ದಾರೆ. ಇದೇ ಶಾಂತಿದೂತರ ಹೀನಕೃತ್ಯ” ಎಂದು ಆರೋಪಿಸಿದ್ದಾರೆ.

ಅವರು ಇನ್ನಷ್ಟು ಕಿಡಿಕಾರುತ್ತಾ, “ಭಾರತವನ್ನು ವಿಭಜಿಸಿದವರು, ಕಾಶ್ಮೀರದಲ್ಲಿ ಅಶೋಕಚಕ್ರ ಒಡೆದವರು, ಅಖಂಡ ಭಾರತವನ್ನು ತುಂಡರಿಸಿದವರು ಇವರೇ. ಇಂತಹವರನ್ನು ಶಾಂತಿದೂತರೆಂದು ಹೊಗಳುವುದು ಎಷ್ಟು ಸರಿಯಾಗಿದೆ? ಒಂದು ದಿನ ಸಂವಿಧಾನವನ್ನು ಬದಲಿ ಮಾಡಿ ಷರಿಯಾ ಜಾರಿಗೊಳಿಸುವವರಾಗಬಹುದು. ರಾಷ್ಟ್ರಧ್ವಜ, ರಾಷ್ಟ್ರಲಾಂಛನಕ್ಕೆ ಗೌರವವಿಲ್ಲದವರು ಸಂವಿಧಾನವನ್ನು ಉಳಿಸಿಯಾರೆ?” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ. ಆದರೆ ಈ ಘಟನೆ ಬಳಿಕ ರಾಜಕೀಯ ವಲಯದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ.

ಇದನ್ನೂ ಓದಿ