ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅರಾವಳಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮುಂದುವರಿದರೆ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಅರಾವಳಿ ಬೆಟ್ಟ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಹೇಳಿಕೆಗಳನ್ನು ನೀಡಿದೆ. ಇದರಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಸಮಸ್ಯೆಗಳನ್ನು ಸಮಗ್ರ ರೀತಿಯಲ್ಲಿ ಪರಿಶೀಲಿಸಲು ತಜ್ಞರ ಸಮಿತಿಯನ್ನು ನಿರ್ಮಿಸಲು ನಿರ್ಧರಿಸಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರನ್ನೊಳಗೊಂಡ ಪೀಠವು, ಅರಾವಳಿ ಬೆಟ್ಟಗಳ ರಕ್ಷಣೆ ಅಗತ್ಯ. ಈ ಪ್ರದೇಶದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದೆ.
ಹಳೆಯ ಪರ್ವತ ಶ್ರೇಣಿಗಳಲ್ಲಿ ಅರಾವಳಿ ಬೆಟ್ಟ ಒಂದಾಗಿದ್ದು, ದೆಹಲಿಯಿಂದ ಗುಜರಾತ್‌ನವರೆಗೆ ಹರಿಯಾಣ ಮತ್ತು ರಾಜಸ್ಥಾನದ ಮೂಲಕ ಹಾದುಹೋಗುತ್ತದೆ. ಇದು ಥಾರ್ ಮರುಭೂಮಿಯ ವಿಸ್ತರಣೆಯನ್ನು ತಡೆಯುವ ಹಸಿರು ತಡೆಗೋಡೆಯಾಗಿದ್ದು ಪರಿಸರ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಅನಿಯಂತ್ರಿತ ಗಣಿಗಾರಿಕೆ ಶಾಶ್ವತವಾಗಿ ಹಾನಿ ಮಾಡುತ್ತದೆ ಎಂದು ನ್ಯಾಯಾಲಯವು ಹೇಳಿದೆ.
ವಿಚಾರಣೆಯ ವೇಳೆ ಅರಾವಳಿ ಪ್ರದೇಶದ ವಿವಿಧ ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಪೀಠದ ಗಮನಕ್ಕೆ ತರಲಾಯಿತು. ಇದನ್ನು ಗಮನಿಸಿದ ನ್ಯಾಯಾಲಯವು, ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ನೀಡಿದ ಭರವಸೆಯನ್ನು ದಾಖಲಿಸಿಕೊಂಡಿದ್ದು, ಯಾವುದೇ ಅನಧಿಕೃತ ಗಣಿಗಾರಿಕೆಯನ್ನು ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಮಗ್ರ ಮತ್ತು ಆಳವಾದ ಪರಿಶೀಲನೆ ನಡೆಸಲು ಪರಿಸರ ತಜ್ಞರು, ವಿಜ್ಞಾನಿಗಳು ಮತ್ತು ವಿಷಯ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಮತ್ತು ಅಮಿಕಸ್ ಕ್ಯುರಿಯೆ ಕೆ. ಪರಮೇಶ್ವರ್ ಅವರಿಗೆ ಪ್ರಸ್ತಾವಿತ ಸಮಿತಿಗೆ ಸೂಕ್ತ ಹೆಸರನ್ನು ನಾಲ್ಕು ವಾರಗಳೊಳಗೆ ಸೂಚಿಸುವಂತೆ ನಿರ್ದೇಶಿಸಿದೆ.


