ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇವಲ ಎರಡು ತಿಂಗಳ ಹಿಂದಷ್ಟೇ ಹೊಸ ಬಾಳಿಗೆ ಕಾಲಿಟ್ಟಿದ್ದ ಯುವಕನೊಬ್ಬ, ಪತ್ನಿಯ ವಿಶ್ವಾಸದ್ರೋಹಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಹರೀಶ್ (32) ಎಂದು ಗುರುತಿಸಲಾಗಿದೆ. ಮದುವೆಯಾದ ಎರಡೇ ತಿಂಗಳಿಗೆ ಪತ್ನಿ ಬೇರೊಬ್ಬನ ಜೊತೆ ಪರಾರಿಯಾಗಿದ್ದಳು. ಈ ಘಟನೆಯಿಂದ ತೀವ್ರವಾಗಿ ನೊಂದಿದ್ದ ಹರೀಶ್, ತನ್ನ ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಹರೀಶ್ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಪತ್ನಿ, ಅತ್ತೆ, ಮಾವ ಹಾಗೂ ಪತ್ನಿಯನ್ನು ಕರೆದುಕೊಂಡು ಹೋದ ಯುವಕನೇ ನೇರ ಕಾರಣ ಎಂದು ಆರೋಪಿಸಿದ್ದಾನೆ. “ಪತ್ನಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಪ್ರಾಣ ಬೆದರಿಕೆ ಹಾಕುತ್ತಿದ್ದಳು” ಎಂದು ನೋವಿನಿಂದ ಬರೆದುಕೊಂಡಿದ್ದಾನೆ. ಅಲ್ಲದೆ, ತನ್ನ ಅಂತ್ಯಸಂಸ್ಕಾರವನ್ನು ಬಸವ ಧರ್ಮದ ವಿಧಿವಿಧಾನದಂತೆ ನೆರವೇರಿಸಬೇಕೆಂದು ಆತ ವಿನಂತಿಸಿದ್ದಾನೆ.
ಪ್ರಸ್ತುತ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



