March 25, 2026
Wednesday, March 25, 2026
spot_img

ಕೊಡಗಿನಲ್ಲಿ ವಿಲಕ್ಷಣ ಘಟನೆ: ಅಂಗಡಿಗೆಂದು ಕರೆದೊಯ್ದು ವ್ಯಕ್ತಿಯ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ!

ಹೊಸ ದಿಗಂತ ವರದಿ, ಮಡಿಕೇರಿ:

ಅಂಗಡಿಗೆಂದು ಕರೆದೊಯ್ದು ವ್ಯಕ್ತಿಯೊಬ್ಬನನ್ನು ಕೊಲೆಗೈದಿರುವ ಘಟನೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಸಮೀಪದ ಕಾನನಕಾಡು ಕೋಗಿಲೆಹಳ್ಳ‌ ಎಸ್ಟೇಟ್’ನಲ್ಲಿ ನಡೆದಿದೆ.

ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಒರಿಸ್ಸಾ ಮೂಲದ ಅಶ್ವಿನಾ ಗೊಮಾಂಗೊ(30) ಸಾವಿಗೀಡಾದವರಾಗಿದ್ದು, ಅದೇ ಎಸ್ಟೇಟ್’ನ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಮಹೇಶ್ ಎಂಬಾತನೇ ಕೊಲೆ ಆರೋಪಿ.

ಅಶ್ವಿನಾ ಗೊಮಾಂಗೊ ಅವರ ಪತ್ನಿ ಸುಂಬಾರಿ ಗೊಮಾಂಗೊ ಅವರು ನೀಡಿದ ದೂರಿನ್ವಯ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಘಟನೆಯ ವಿವರ: ಸುಂಬಾರಿ ಗೊಮಾಂಗೊರವರು ತನ್ನ ದೊಡ್ಡಪ್ಪನ ಮಗಳು ಕುಮಾರಿ ಹಾಗೂ ಆಕೆಯ ಪತಿ ಅಶ್ವಿನಾ ಗೊಮಾಂಗೊರವರು 13 ವರ್ಷಗಳ ಹಿಂದೆ ಕೆಲಸಕ್ಕೆಂದು ಕೋಗಿಲೆಹಳ್ಳ ಎಸ್ಟೇಟ್’ಗೆ ಬಂದಿದ್ದು,‌ಜೊತೆಗೆ ಮಹೇಶನನ್ನೂ ಕರೆತಂದಿದ್ದರು.
ಎರಡು ವರ್ಷಗಳವರೆಗೆ ಅಶ್ವಿನಾ ಗೊಮಾಂಗೊ ಜೊತೆ ಸಂಸಾರ ಮಾಡಿಕೊಂಡಿದ್ದ ಕುಮಾರಿ ನಂತರ ತನ್ನ ಮಗಳನ್ನು ಕರೆದುಕೊಂಡು ಶ್ರೀನಿವಾಸ್ ಎಂಬವರ ಜೊತೆ ಹೋಗಿದ್ದು, ಅದಾದ ಬಳಿಕ ಅಶ್ವಿನಾ ಗೊಮಾಂಗೊ ಸುಂಬಾರಿ ಜೊತೆ ಸಂಸಾರ
ಮಾಡಿಕೊಂಡಿದ್ದರೆನ್ನಲಾಗಿದೆ. ಅದೇ ತೋಟದ ಲೈನ್ ಮನೆಯೊಂದರಲ್ಲಿ ತನ್ನ ತಾಯಿ ಹಾಗೂ ಇಬ್ಬರು ತಮ್ಮಂದಿರೊಂದಿಗೆ ಮಹೇಶ್ ವಾಸವಿದ್ದು, ತನ್ನ ಮನೆ ಸಮೀಪ ಕೆಲಸ ಮಾಡುತ್ತಿದ್ದಾಗ ಸುಂಬಾರಿಗೆ ಮಹೇಶ್’ನ ತಮ್ಮ ನಾಗೇಶ್ ಎಂಬಾತನ ಪರಿಚಯವಾಗಿದೆ. ಸುಂಬಾರಿ ಹಾಗೂ ನಾಗೇಶ್ ಅವರುಗಳು ತೋಟದಲ್ಲಿ ಕೆಲಸ ಮಾಡುವಾಗ ಹಾಗೂ ಲೈನ್ ಮನೆ ಬಳಿ ಮಾತನಾಡುತ್ತಿರುವುದನ್ನು ಗಮನಿಸಿದ್ದ ಮಹೇಶ ಹಲವು ಬಾರಿ ಅಶ್ವಿನಾ ಗೊಮಾಂಗೊ ಜೊತೆ ಜಗಳವಾಡಿದ್ದನೆಂದು ಹೇಳಲಾಗಿದೆ.

ಈ ಸಮಯದಲ್ಲಿ ಅಶ್ವಿನಾಗೊಮಾಂಗೊ ಮಹೇಶನಿಗೆ ‘ನೀನು ನನ್ನ ಹೆಂಡತಿಯ ಬಗ್ಗೆ ಅನುಮಾನಪಡಬೇಡ, ಸುಮ್ಮನೆ ನನ್ನ ಹೆಂಡತಿಯ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ಹೇಳಬೇಡ ಎಂದು ಹೇಳಿದ್ದಲ್ಲದೆ, ಈ ವಿಷಯವನ್ನು ತೋಟದ ಮಾಲಕರಾದ ರಾಮ್‌ ಬೋಪಯ್ಯ ಹಾಗೂ ತೋಟದ ರೈಟರ್ ಚಂದ್ರರವರಿಗೂ ತಿಳಿಸಿದ್ದು ಅವರು ಸಹ ಮಹೇಶನಿಗೆ ಬೈದು ಬುದ್ದಿ ಹೇಳಿದ್ದರೆನ್ನಲಾಗಿದೆ.

ಆಗಿನಿಂದ ಅಶ್ವಿನಾಗೊಮಾಂಗೊ ಜೊತೆ ವೈಮನಸ್ಸು ಹೊಂದಿದ್ದ ಮಹೇಶ ಮಾ.2 ರಂದು ಮಧ್ಯಾಹ್ನ ಅಶ್ವಿನಾ ಗೊಮಾಂಗೊ ಮನೆಗೆ ಬಂದು ಅಂಗಡಿಗೆ ಹೋಗಿ ಬರುವ ಎಂದು ಅಶ್ವಿನಾನನ್ನು ಕರೆದಿದ್ದಾನೆ. ಈ ಸಂದರ್ಭ ತಾನು ಬರುವುದಿಲ್ಲ ಎಂದು ಹೇಳಿದರೂ ಕೇಳದ ಮಹೇಶ ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ.

ಅಪರಾಹ್ನ ಮಹೇಶನು ಒಬ್ಬನೇ ವಾಪಾಸ್ ಬರುವುದನ್ನು ಗಮನಿಸಿದ ಸುಂಬಾರಿ, ‘ನನ್ನ ಗಂಡ ಎಲ್ಲಿ ಎಂದು ಕೇಳಿದಾಗ, ಬರುತ್ತಾರೆ ಎಂದು ಹೇಳಿ ಅವನ ಲೈನ್ ಮನೆಗೆ ಹೋಗಿದ್ದಾನೆ. ಸಂಜೆ 4.30 ಗಂಟೆಗೆ ಮಹೇಶನಿಗೆ ಫೋನ್ ಮಾಡಿದಾಗ ಪೋನ್ ತೆಗೆಯದಿರುವಾಗ ಸುಂಬಾರಿ, ಲೈನ್ ಮನೆ ಹತ್ತಿರ ಇರುವ ಅಂಗಡಿಯ ಮಾಲಕ ನಾರಾಯಣರವರಿಗೆ ಪೋನ್ ಮಾಡಿ ಗಂಡನ ಬಗ್ಗೆ ವಿಚಾರಿಸಿದ್ದಾಳೆ. ನಿನ್ನ ಗಂಡ ಹಾಗೂ ಮಹೇಶ್‌ನು ಮಧ್ಯಾಹ್ನ 2 ಗಂಟೆಗೆ ಕೋಗಿಲೆಹಳ್ಳದ ಕಾಫಿ ತೋಟದ ಕಡೆಗೆ ಹೋಗಿರುವುದಾಗಿ ಮಾಹಿತಿ ಲಭಿಸಿದೆ.
ಆದರೆ ರಾತ್ರಿ 07.30 ಗಂಟೆಯಾದರೂ ಗಂಡ ಮನಗೆ ಬರದಿದ್ದಾಗ, ನಾಗೇಶ್ ಹಾಗೂ ಪಕ್ಕದ ಲೈನ್ ಮನೆಯಲ್ಲಿ ವಾಸವಾಗಿರುವ ಮಾದೇವಿ ಅವರುಗಳು, ಅಂಗಡಿ ಮಾಲಕ ನಾರಾಯಣರವರು ಹೇಳಿದಂತೆ ಕೋಗಿಲೆ ಹಳ್ಳದ ಕಾಫಿತೋಟಕ್ಕೆ ಹೋಗಿ ಟಾರ್ಚ್ ಬೆಳಕು ಸಹಾಯದಿಂದ ಹುಡುಕಿದಾಗ ಕಾಫಿತೋಟದ ಬಳಿ ಕಾಫಿ ಗಿಡದ ಕೆಳಗೆ ಅಶ್ವಿನಾ ಗೊಮಾಂಗೊ ಮೃತದೇಹ ಗೋಚರಿಸಿದೆ.
ಈ ಬಗ್ಗೆ ತೋಟದ ರೈಟರ್ ಚಂದ್ರರವರಿಗೆ ನಾಗೇಶ್ ಫೋನ್ ಮಾಡಿ ತಿಳಿಸಿದ್ದು, ನಂತರ ಸುಂಬಾರಿ ಹೋಗಿ ಮೃತ ದೇಹವನ್ನು ನೋಡಿದಾಗ, ಮುಖದ ಮೇಲೆ ರಕ್ತಗಾಯವಾಗಿದ್ದು, ಕಂಡು ಬಂದಿದೆ.

ಹಳೆಯ ದ್ವೇಷದಿಂದ ಮಹೇಶನು ತನ್ನ ಗಂಡನನ್ನು ಬಲವಂತವಾಗಿ ತೋಟಕ್ಕೆ ಕರೆದುಕೊಂಡು ಹೋಗಿ ಯಾವುದೋ ಆಯುಧದಿಂದ ಕೊಲೆ ಮಾಡಿರುವುದಾಗಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಹೇಶ ಪೊಲೀಸರಿಗೆ ಶರಣಾಗಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !