ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಗಳ ಸಮಯದಲ್ಲಿ ಕೃತಕ ಬುದ್ಧಿಮತ್ತೆ ಆಧರಿಸಿದ ಮಾಹಿತಿ ಹಂಚಿಕೊಳ್ಳುವಾಗ, ಬಳಕೆ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಆಯೋಗ, ಇತ್ತೀಚಿನ ದಿನಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದು ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ಸುಳ್ಳು ಮಾಹಿತಿಯ ಪ್ರಸಾರಕ್ಕೆ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದು, ಇದು ಅಪಾಯಕಾರಿ ಮತ್ತು ಗಂಭೀರ ಸವಾಲುಗಳನ್ನು ತಂದೊಡ್ಡಿದೆ ಎಂದು ಹೇಳಿದೆ.
ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿರುವ ಪ್ರತಿನಿಧಿಗಳು ಕೃತಕ ಬುದ್ಧಿಮತ್ತೆ ಆಧರಿಸಿ ಸೃಷ್ಟಿಸಲಾದ ಚಿತ್ರ, ಧ್ವನಿ ಮತ್ತು ವಿಡಿಯೋ ಅನ್ನು ಹಂಚಿಕೊಳ್ಳುವಾಗ ಅತ್ಯಂತ ಜಾಗರೂಕತೆಯಿಂದ ಇರಬೇಕು. ಒಂದು ವೇಳೆ ಅವುಗಳು ಚುನಾವಣಾ ಪ್ರಕ್ರಿಯೆ ಅಥವಾ ಸಾಮರ್ಥ್ಯದ ಬಗ್ಗೆ ತಪ್ಪು ಮಾಹಿತಿ ನೀಡುವಂತಿದ್ದರೆ, ಅಂತಹವುಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ನಿಯಮದಡಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಸಿದೆ.
ಕೃತಕ ಬುದ್ಧಿಮತ್ತೆ ಆಧರಿಸಿದ ತಪ್ಪು ಮಾಹಿತಿ ವಿರುದ್ಧ ಕಟ್ಟುನಿಟ್ಟಿನ ಕ್ರಮ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಖಡಕ್ ವಾರ್ನಿಂಗ್

