March 18, 2026
Wednesday, March 18, 2026
spot_img

ಮತಾಂತರಗೊಂಡು ಇತರರನ್ನು ಮತಾಂತರಕ್ಕೆ ಆಮಿಷ ಒಡ್ಡಿದರೆ ಕಠಿಣ ಕ್ರಮ: ಗುಜರಾತ್ ಹೈಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ವ್ಯಕ್ತಿ ಇನ್ನೊಂದು ಧರ್ಮಕ್ಕೆ ತಾನು ಮತಾಂತರಗೊಂಡು, ನಂತರ ಇತರರನ್ನೂ ಮತಾಂತರಗೊಳಿಸಲು ಯತ್ನಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ಮತಾಂತರಕ್ಕೆ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ನಿರ್ಜಾರ್ ದೇಸಾಯಿ ಅವರ ಪೀಠವು ಈ ಮಹತ್ವದ ನಿರ್ಣಯ ಹೊರಡಿಸಿದೆ.

2006 ರಿಂದ 35 ಹಿಂದು ಕುಟುಂಬಗಳ 100 ಬುಡಕಟ್ಟು ಜನಾಂಗದವರನ್ನು ಮತಾಂತರಿಸಿದ ಪ್ರಕರಣದಲ್ಲಿ ಭರೂಚ್‌ನ ಅಮೋದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2021 ರ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ವಜಾಗೊಳಿಸಿದ ನಂತರ ಹೊರಡಿಸಲಾದ ಆದೇಶದಲ್ಲಿ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ನೀಡಿದೆ.

ನಾವು ಹಿಂದುಗಳಾಗಿದ್ದು, ನಮ್ಮನ್ನು ಇಸ್ಲಾಂಗೆ ಮತಾಂತರಿಸಲಾಗಿದೆ. ನಾವು ಈ ಪ್ರಕರಣದಲ್ಲಿ ಬಲಿಪಶುಗಳಾಗಿದ್ದೇವೆ. ಆದರೂ ನಮ್ಮ ವಿರುದ್ಧ ಮತಾಂತರದ ಆರೋಪ ಮಾಡಲಾಗಿದೆ. ನಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಎಫ್‌ಐಆರ್ ರದ್ದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಪೀಠ ವಜಾಗೊಳಿಸಿದ್ದು, ‘ಪ್ರಥಮ ಮಾಹಿತಿ ವರದಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಡ, ಆಮಿಷ ಹಾಗೂ ಪ್ರಭಾವ ಬೀರಿದ್ದು ದಾಖಲಾಗಿದೆ. ಜತೆಗೆ ಸಾಕ್ಷಿಗಳೂ ಅದನ್ನೇ ಹೇಳಿದ್ದಾರೆ. ಈ ಎಲ್ಲವನ್ನೂ ಪರಿಶೀಲಿಸಿದ ನ್ಯಾಯಾಲಯವು, ಮತಾಂತರದ ಸಂತ್ರಸ್ತರು ಎಂದು ಹೇಳಿಕೊಂಡಿರುವ ಆರೋಪಿಗಳು ಮೇಲ್ನೋಟಕ್ಕೆ ಮತಾಂತರದಲ್ಲಿ ಭಾಗಿಯಾಗಿದ್ದಾರೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಆರೋಪ ಹೊತ್ತವರು ಹಿಂದೆ ಹಿಂದುಗಳಾಗಿದ್ದರು ಮತ್ತು ಮತಾಂತರದ ಸಂತ್ರಸ್ತರು ಎಂದು ಒಪ್ಪಲು ಸಾಧ್ಯವಿಲ್ಲ. ಎಫ್‌ಐಆರ್‌ನಲ್ಲಿ ದಾಖಲಾಗಿರುವ, ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ಆರೋಪ ಪಟ್ಟಿಯನ್ನು ಗಮನಿಸಿದರೆ ಇವರು ಸಂತ್ರಸ್ತರು ಎಂದು ಹೇಳಲು ಸಾಧ್ಯವಿಲ್ಲ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !